   ಮೂಲದೊಡನೆ ಪರಿಶೀಲಿಸಿ

ಅನುವಂಶೀಯತೆ

ಜೀವಿ ತಂದೆತಾಯಿಯರಿಂದ ಪಡೆಯುವ ಲಕ್ಷಣಗಳನ್ನು ನಿರ್ಧರಿಸುವ ಮೂಲಾಂಶಗಳು ಪರಿಸರದಲ್ಲಿ ಪ್ರಕಟಗೊಳ್ಳುವಿಕೆ (ಹೆರೆಡಿಟಿ; ಇನ್‍ಹೆರಿಟೆನ್ಸ್). ಸಸ್ಯಗಳ ಮತ್ತು ಪ್ರಾಣಿಗಳ ರಚನೆ ಮತ್ತು ಶಾರೀರಕ ಲಕ್ಷಣಗಳು ಒಂದು ಗೊತ್ತಾದ ಪರಿಸರದಲ್ಲಿ ಅನುವಂಶೀಯವರ್ತನೆಯಿಂದುಂಟಾಗುತ್ತವೆ ಎಂಬುದು ಸರ್ವವಿದಿತ. ಸಾವಯವ ಅನುವಂಶೀಯತೆ (ಆಗ್ರ್ಯಾನಿಕ್ ಇನ್‍ಹೆರಿಟೆನ್ಸ್) ಮತ್ತು ಅದು ಕಾರ್ಯಗತವಾಗಲು ಬೇಕಾದ ಪರಿಸರ ಒಂದಕ್ಕೊಂದು ಪೂರಕವಾದವೂ ಬೇರ್ಪಡಿಸಲಾಗದವೂ ಆಗಿವೆ.  ಇವೆರಡರಲ್ಲಿ ಪ್ರತಿಯೊಂದರ ಸ್ಪಲ್ಪ ವ್ಯತ್ಯಾಸವೂ ಒಂದೇ ರೀತಿಯಲ್ಲಿ ಜೀವಿಗಳಲ್ಲಿ ಮಾರ್ಪಾಟುಗಳನ್ನುಂಟುಮಾಡುವ ಶಕ್ತಿ ಹೊಂದಿರುತ್ತದೆ. ಆದ್ದರಿಂದ ಅನುವಂಶೀಯತೆ ಮತ್ತು ಪರಿಸರ, ಇವೆರಡರಲ್ಲಿ ಯಾವುದು ಮುಖ್ಯವಾದದ್ದು? ಯಾವುದು ಹೆಚ್ಚು ಪ್ರಭಾವಶಾಲಿಯಾದದ್ದು? ಎಂದು ಆಗಾಗ್ಗೆ ಕೇಳಿಬರುವ ಪ್ರಶ್ನೆಗಳು ಅರ್ಥವಿಲ್ಲದವುಗಳಾಗಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇವೆರಡೂ ವ್ಯಕ್ತಿ ವ್ಯಕ್ತಿಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಉಂಟುಮಾಡುವಲ್ಲಿ ಸಮಾನಪ್ರಾಧಾನ್ಯ ಪಡೆದಿವೆ. ಇವುಗಳ ಅನ್ಯೋನ್ಯ ಸಂಬಂಧ ಏನೇ ಇರಲಿ ಮೊದಲು ಅನುವಂಶೀಯತೆಯ ಮಹತ್ವ, ಕಾರ್ಯಗಳು ಮುಂತಾದವನ್ನೆಲ್ಲ ತಿಳಿದುಕೊಂಡು ಅನಂತರ ಪರಿಸರದ ವ್ಯತ್ಯಾಸಗಳಿಂದುಂಟಾಗುವ ಪರಿಣಾಮಗಳನ್ನು ಪರಿಶೀಲಿಸುತ್ತೇವೆ. 
ಅನುವಂಶೀಯತೆಯ ವಾದಗಳು: ಬಹಳ ಕಾಲದಿಂದಲೂ ಅನುವಂಶೀಯತೆಯ ಬಗ್ಗೆ ವಾದಗಳು ಮೂಡುತ್ತಲೇ ಬಂದಿವೆ. ಇವುಗಳೆಲ್ಲದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಅವನ್ನು ವರ್ಗೀಕರಿಸಿ, ಅವಲೋಕಿಸುವುದು ಅಗತ್ಯ. ಈ ವಾದಗಳನ್ನು ಏಕಲಿಂಗ ಅನುವಂಶೀಯತೆ ಮತ್ತು ದ್ವಿಲಿಂಗ ಅನುವಂಶೀಯತೆ ಎಂದು ಎರಡು ವಿಭಾಗಗಳಾಗಿ ವರ್ಗೀಕರಿಸಬಹುದು. ದ್ವಿಲಿಂಗ ಅನುವಂಶೀಯತೆಯಲ್ಲಿ ಹೆಣ್ಣು ಗಂಡುಗಳೆರಡೂ ತಮ್ಮ ಮುಂದಿನ ಪೀಳಿಗೆಯ ಅನುವಂಶೀಯತೆಯಲ್ಲಿ ಪಾಲುಗೊಳ್ಳುತ್ತವೆ. ಏಕಲಿಂಗ ಅನುವಂಶೀಯತೆಯಲ್ಲಿ ಹೆಣ್ಣು ಇಲ್ಲವೆ ಗಂಡು ಮಾತ್ರ ಪೂರ್ಣವಾಗಿ ಇಲ್ಲವೆ ಹೆಚ್ಚಾಗಿ ಭಾಗವಹಿಸುತ್ತದೆ. ಈ ಅಭಿಪ್ರಾಯಗಳು ಸಾಧುವಲ್ಲವಾದರೂ ಅವುಗಳ ಆಧಾರದ ಮೇಲೆ ವಂಶಾವಳಿತಳಿಕರಣ (ಪೆಡಿಗ್ರಿ ಬ್ರೀಡಿಂಗ್- ತಂದೆತಾಯಿಯರ ಸಂಬಂಧಿಗಳ ಮತ್ತು ಸಂಬಂಧಿಗಳ ಪೀಳಿಗೆಗಳನ್ನು ಅಭ್ಯಸಿಸಿ ಆ ಆಧಾರದ ಮೇಲೆ ತಳಿಯನ್ನು ಆಯ್ದು ಉತ್ತಮಗೊಳಿಸುವ ವಿಧಾನ) ಮತ್ತು ತತ್ಸಂಬಂಧದ ನಿಯಮಾವಳಿಗಳು ಅನೇಕ ದೇಶಗಳಲ್ಲಿ ರೂಪುಗೊಂಡಿದೆ. ಅನುವಂಶೀಯತೆಯಲ್ಲಿ ಎರಡು ಲಿಂಗಗಳೂ ಹೆಚ್ಚು ಕಡಿಮೆ ಸಮಾನಪ್ರಾಧಾನ್ಯಹೊಂದಿವೆ ಎಂಬುದನ್ನು ನಿರೂಪಿಸಲು ಸರಳಗಣಿತಶಾಸ್ತ್ರದ ಒಂದು ಸಾಮಾನ್ಯಪರೀಕ್ಷೆ ಶಕ್ತವಾಗಿದೆ. ಆದರೂ ಅನೇಕ ಪ್ರತ್ಯೇಕವಾದಗಳು, ಅಭಿಪ್ರಾಯಗಳು ಇನ್ನೂ ಇದ್ದು ಅವು ಹಳೆಯ ಭಾವನೆಗಳ ಕಡೆಗೇ ಆಗಾಗ್ಗೆ ವಾಲುತ್ತದೆ. ಆದ್ದರಿಂದ ಇವೆರಡನ್ನೂ ಪ್ರತ್ಯೇಕಿಸಿ ವಿಮರ್ಶನಾದೃಷ್ಟಿಯಿಂದ ವಿವೇಚಿಸುವುದು ಅಗತ್ಯ.
ಕೆಲವು ಅನಿಶ್ಚಿತ ಮೂಲಘಟಕಗಳು ಅನುವಂಶೀಯ ಗುಣಗಳನ್ನು ತಂದೆತಾಯಿಗಳಿಂದ ಮುಂದಿನ ಪೀಳಿಗೆಗೆ ಬರುವಂತೆ ಮಾಡುತ್ತದೆ. ಈಗ ಈ ತರಹ ಮೂಲ ಘಟಕಗಳು ಅದೇ ಶರೀರದಲ್ಲಿ ಒಂದೆಡೆ ಸೇರಿದಾಗ ಬೆರಕೆ ಅಥವಾ ಮಿಶ್ರವಾಗುತ್ತವೆ ಇಲ್ಲವೆ, ಸಮ್ಮಿಳಿಯುತ್ತವೆ ಅಥವಾ ಶಾಶ್ವತವಾಗಿ ಪ್ರತ್ಯೇಕವಾಗಿಯೇ ಇರುತ್ತದೆ. ಅಲ್ಲದೆ ಹೊಸ ಸಂಯೋಜನೆಯಲ್ಲಿ ಪುನರ್ವಿತರಣಾಶಕ್ತಿ ಪಡೆದಿರುತ್ತವೆ. ಇವೆರಡು ಅಭಿಪ್ರಾಯಗಳನ್ನು ಪ್ರತ್ಯೇಕಿಸಿ ವಿವೇಚಿಸಲೋಸುಗವೇ ಒಂದು ಸಾಮಾನ್ಯಪರೀಕ್ಷೆ ಇದೆ. ಎರಡು ವ್ಯಕ್ತಿಗಳ ಸಂಯೋಗವಾಗಿ, ಅವರ ಸಂತತಿಯಲ್ಲಿ ಮತ್ತೆ ಸಂತತಿಯಾಗಿ ಮತ್ತೆ ಅವರಲ್ಲಿ ಸೇರಿಕೆಯಾದಲ್ಲಿ ನಾವು ಮೂರು ಪೀಳಿಗೆಗಳನ್ನು (ತಂದೆತಾಯಿಗಳು, ಅವರ ಮಕ್ಕಳು ಮತ್ತು ಮೊಮ್ಮಕ್ಕಳು) ಅಭ್ಯಸಿಸಬಹುದು. ಈಗ ಮಕ್ಕಳು (ಎರಡನೆಯ ಪೀಳಿಗೆ) ಮೊಮ್ಮಕ್ಕಳಿಗಿಂತ ಹೆಚ್ಚು ಬದಲಾವಣೆಗಳನ್ನು (ವೇರಿಯಬಿಲೆಟೀಸ್) ಹೊಂದಿದ್ದರೆ ನಾವು ಸಮ್ಮಿಳಿತ ಅನುವಂಶೀಯತೆಯಲ್ಲಿದ್ದೇವೆ (ಬ್ಲೆಂಡಿಂಗ್ ಇನ್‍ಹೆರಿಟೆನ್ಸ್) ಎಂದು ಹೇಳಬಹುದು. ಏಕೆಂದರೆ, ಸಮ್ಮಿಳನ ಇಲ್ಲವೆ ಮಿಶ್ರಣವಾಗುವಿಕೆ ಯಾವಾಗಲೂ ಸಮರೂಪತೆ (ಯೂನಿಫಾರ್ಮಿಟಿ) ಕೊಡುತ್ತದೆ. ಆದರೆ ಮೊಮ್ಮಕ್ಕಳು ಮಕ್ಕಳಷ್ಟೇ ಅಥವಾ ಇನ್ನೂ ಹೆಚ್ಚು ಬದಲಾಗಿಸಿದ್ದಲ್ಲಿ ಅನುವಂಶೀಯತೆಯ ಮೂಲಘಟಕಗಳು ಪ್ರತ್ಯೇಕವಾಗಿಯೇ ಉಳಿದಿವೆ ಎಂಬುದು ವಿದಿತವಾಗುತ್ತದೆ. ಈ ಎರಡನೆಯ ಅಭಿಪ್ರಾಯ ಸತ್ಯವೆನಿಸಿದೆ. ಇದನ್ನು ಕಣೀಯ ಅನುವಂಶೀಯತೆ ಅಥವಾ ಪಾರ್ಟಿಕ್ಯುಲೇಟ್ ಅನುವಂಶೀಯತೆ ಎಂದು ಕರೆಯುತ್ತಾರೆ. ಈ ಅನುವಂಶೀಯ ಘಟಕಗಳು ಒಂದು ಪೀಳಿಗೆಯಿಂದ ಮತ್ತೊಂದಕ್ಕೆ ಪ್ರತ್ಯೇಕವಾಗಿಯೇ ಬಂದರೂ ತಂದೆತಾಯಿಯರಿಂದ ಬಂದವುಗಳು ಪುನಃ ಒಂದುಗೂಡುವಾಗ ಹೊಸ ಸಂಯೋಜನೆಗಳು ಆಗಬಹುದು. ಏಕೆಂದರೆ ಅಂತರತಳಿಕರಣದಿಂದ (ಇನ್‍ಬ್ರೀಡಿಂಗ್) ಜನಿಸಿದ ಮೊಮ್ಮಕ್ಕಳು ಮಕ್ಕಳಷ್ಟೇ ಬದಲಾಯಿಸುವುದಿರಲಿ ಇನ್ನೂ ಹೆಚ್ಚಾಗಿಯೇ ಬದಲಾಯಿಸಿರುತ್ತಾರೆ.

ಇಷ್ಟೆಲ್ಲ ಸತ್ಯಾಂಶಗಳನ್ನು ಗಮನದಲ್ಲಿರಿಸಿಕೊಂಡು ಮುಂದಿನ ಪರಿಶೀಲನೆ ನಡೆಸಬಹುದು. ತಂದೆ ತಾಯಿಗಳಿಬ್ಬರೂ ಅವರ ಮಕ್ಕಳ ಅನುವಂಶೀಯ ಗುಣಗಳ ವಿಷಯದಲ್ಲಿ ಸಮಾನಪ್ರಾಧಾನ್ಯ ಹೊದಿರುವುದರಿಂದ ಒಂದು ಹೊತ್ತಾದ ಗುಣದ ನಿಯಂತ್ರಣಕ್ಕೆ ಇವರಲ್ಲಿ ಪ್ರತಿಯೊಬ್ಬರೂ ಒಂದೊಂದು ಅನುವಂಶೀಯ ಮೂಲಘಟಕವನ್ನು ನೀಡಿರುತ್ತಾರೆ. ಆದ್ದರಿಂದ ಪ್ರತಿ ಲಕ್ಷಣವೂ ಜೀನ್‍ಗಳು (geಟಿes) ಎಂಬ ಅನುವಂಶೀಯ ಘಟಕಗಳ ವರ್ತನೆಯಿಂದ ನಿರ್ಧರಿಸಲ್ಪಡಬೇಕು. ಈ ಎರಡರಲ್ಲಿ ಒಂದು ತಾಯಿಯಿಂದ ಮತ್ತೊಂದು ತಂದೆಯಿಂದ ಬಂದಿರುತ್ತವೆ. ಆದ್ದರಿಂದ ಈ ಜೀನ್‍ಗಳು ಜೊತೆಯಾಗಿಯೇ ಇರಬೇಕಾಗಿದೆ. ಇವನ್ನು ಅನ್ಯರೂಪಿಗಳು ಅಥವಾ ಪ್ರತಿರೂಪಿಗಳು (ಅಲೆಲೋಮಾರ್ಫ್) ಎಂದು ಕರೆಯುತ್ತಾರೆ. ಒಂದೇ ಪ್ರವೃತ್ತಿಯಿರುವ ಜೀನ್‍ಗಳಿಂದ ರಚನೆಗೊಂಡಿದ್ದರೆ ಸಮಜೋಡಿ ಎಂದೂ ಒಂದೇ ಗುಣವನ್ನು ನಿಯಂತ್ರಿಸುವ ಬೇರೆ ಬೇರೆ ಪ್ರವೃತ್ತಿಯುಳ್ಳವುಗಳಿಂದ ರಚನೆಗೊಂಡಿದ್ದರೆ ಮಿಶ್ರಜೋಡಿ ಎಂದೂ ಈ ಪ್ರತಿರೂಪಿಗಳನ್ನು ಕರೆಯುತ್ತಾರೆ. ಈ ವಿಚಾರ ನಾವು ಮಕ್ಕಳ ಕಡೆಯಿಂದ ತಂದೆತಾಯಿಗಳ ಕಡೆ ನೋಡಿದಾಗ ಸರಳವಾಗಿಕಂಡರೂ ಈ ಮಕ್ಕಳ ಕಡೆಯಿಂದ ಮೊಮ್ಮಕ್ಕಳ ಕಡೆ ನೋಡಿದಾಗಲೂ ಪ್ರತಿರೂಪಿಗಳನ್ನು ಜೀನ್‍ಜೊತೆಗಳಿಂದ ಮಾಡಲಾಗಿದೆ ಮತ್ತು ಅವು ತಂದೆತಾಯಿಗಳಿಂದ ಬೇರೆ ಬೇರೆಯಾಗಿಯೇ ಬಂದಿವೆ ಎಂದು ಹೇಳುವಂತಿರಬೇಕು. ಇದನ್ನು ಸ್ಪಷ್ಟಪಡಿಸುವಂತೆ ಪ್ರತಿರೂಪಿ ಜೊತೆಗಳಲ್ಲಿ ಒಂದೊಂದು ಪ್ರತಿರೂಪಿಯೂ ಅಂಡ ಹಾಗೂ ರೇತ್ರಾಣು ಉತ್ಪತ್ತಿಕಾಲದಲ್ಲಿ ಬೇರ್ಪಟ್ಟು ಪ್ರತಿ ಸಂಯೋಗಿಜೀವಕಣಕ್ಕೂ ಒಂದೊಂದು ಸೇರಿಕೊಂಡಿರುತ್ತದೆ. ಆದ್ದರಿಂದ ಪ್ರತಿ ಲಕ್ಷಣವೂ ಎರಡು ಅನುವಂಶೀಯ ಘಟಕವನ್ನವಲಂಬಿಸಿರುತ್ತದೆ; ಇವುಗಳಲ್ಲಿ ಒಂದೊಂದು ವಿವಿಧ ಗ್ಯಾಮಿಟ್ಗಳಲ್ಲಿರುತ್ತದೆ (gಚಿmeಣe); ಗರ್ಭಾಂಕುರವಾದಾಗ ಮತ್ತೆ ಬಂದು ಜೊತೆಗೂಡುತ್ತದೆ ಎಂಬ ತೀರ್ಮಾನಕ್ಕೆ ಬಂದಂತಾಯಿತು. (ಗ್ಯಾಮಿಟ್‍ಗೆ ಉದಾಹರಣೆ: ಅಂಡಾಣು, ರೇತ್ರಾಣು ಅಂದರೆ ಸ್ಪರ್ಮ್, ಓವ) ಅಂತೆಯೇ ಗ್ಯಾಮಿಟ್ ಉತ್ಪತ್ತಿಯ ಕಾಲದಲ್ಲಿ ಪ್ರತಿರೂಪಿ ಜೊತೆಗಳ ಒಂದೊಂದು ಘಟಕವೂ ಬೇರ್ಪಟ್ಟು ಪ್ರತ್ಯೇಕವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದಂತಾಗಿದೆ.
ಮೆಂಡಲ್ ವಾದ: ಗ್ರೆಗರ್ ಮೆಂಡಲ್ (ಅರ್ಥಪೂರ್ಣವಾಗಿ) ಆಧುನಿಕ ತಳಿಶಾಸ್ತ್ರದ ಪಿತಾಮಹ. ಇವನಿಗೆ ಪ್ರಪ್ರಥಮವಾಗಿ ಪ್ರತ್ಯೇಕತಾ ವಿಧಾನವನ್ನು (ಸೆಗ್ರಗೇಷನ್ ಪ್ರೋಸೆಸ್) ಊಹಿಸಿ ಸಾದರಪಡಿಸಿದ ಹಿರಿಮೆ ಸಲ್ಲುತ್ತದೆ. ಮೆಂಡಲ್ ಬ್ರನ್ ಪಟ್ಟಣದ ಒಂದು ಕ್ರೈಸ್ತ ದೇವಾಲಯದಲ್ಲಿ ಸಂನ್ಯಾಸಿಯಾಗಿದ್ದ. ದೇವಾಲಯದ ತೋಟದಲ್ಲಿ ಬಟಾಣಿಕಾಳುಗಳನ್ನು ಬೆಳೆಸಿ ಅನುವಂಶೀಯತೆಯ ವಿಷಯವಾಗಿ ಅನೇಕ ಪ್ರಯೋಗಗಳನ್ನು ನಡೆಸಿದ. ಅವನ ತಳಿಶಾಸ್ತ್ರದ ವಿದ್ಯಾಪ್ರೌಢಿಮೆ, ತಿಳುವಳಿಕೆಗಳು ಅಂದಿನ ಕಾಲಕ್ಕಿಂತ ಬಹಳ ಮುಂದಿದ್ದುವು. ತನ್ನ ಪ್ರಯೋಗಗಳ ಸಾರಾಂಶವನ್ನು ಮೆಂಡಲ್ 1865ರಲ್ಲಿ ಬ್ರನ್‍ನಲ್ಲಿ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಆಶ್ರಯದಲ್ಲಿ ನಡೆದ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಕಟಿಸಿದ. ಅವನ ಪ್ರಯೋಗ ಫಲಿತಾಂಶಗಳು ಒಂದು ಸಾಧಾರಣ ಪತ್ರಿಕೆಯಲ್ಲಿ ಬಂದುವು. ಅದು ಅಷ್ಟೇನೂ ಪ್ರಸಿದ್ಧವಾದದ್ದಲ್ಲದಿದ್ದರೂ ಅದರ ಪ್ರತಿಗಳು ಯುರೋಪಿನ ಅನೇಕ ದೇಶಗಳಿಗೆ ಹೋದವು. ಆದರೂ ಮೆಂಡಲ್‍ನ ಈ ಕಾರ್ಯ ಯಾರ ವಿಶೇಷ ಗಮನವನ್ನೂ ಸೆಳೆಯಲಿಲ್ಲ. ಅವನ ಕಾರ್ಯದ ಪ್ರಾಮುಖ್ಯವನ್ನು ಯಾರೂ ಅರಿಯಲಾಗಲಿಲ್ಲ. 1906ರಲ್ಲಿ ಅಂದರೆ ಮೆಂಡಲ್ ಕಾಲವಾದ 16 ವರ್ಷಗಳ ಅನಂತರ ಡಿರೀಸ್, ಕಾರೆನ್ಸ್ ಮತ್ತು ಪರ್ಮಾಕ್ ಇವರು ಪ್ರತ್ಯೇಕವಾಗಿ ಮೆಂಡಲ್ ತತ್ವಗಳ ಫಲಿತಾಂಶಗಳನ್ನು ಕಂಡುಹಿಡಿದರು; ಮೆಂಡಲ್‍ನ ಕಾಣಿಕೆಯ ಮಹತ್ವವನ್ನು ಆಗ ಜಗತ್ತು ಅರಿಯಿತು. ತತ್‍ಕ್ಷಣವೇ ಮೆಂಡಲ್ ಜಗತ್ಪ್ರಸಿದ್ಧ ವ್ಯಕ್ತಿಯಾದ.

ಪ್ರತ್ಯೇಕತೆಯ ಪರಿಣಾಮವನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ಸಾಮಾನ್ಯ ಕರೆಂಟ್ಮಾತ್ ಕೀಟದಲ್ಲಿ ಒಂದು ಜೊತೆ ಭಿನ್ನಲಕ್ಷಣಗಳನ್ನು ತೆಗೆದುಕೊಳ್ಳೋಣ. ಈ ಕೀಟದಲ್ಲಿ ಬಿಳಿ ಮತ್ತು ಹಳದಿ ಬಣ್ಣದವುಗಳಿವೆ. ಇವುಗಳಲ್ಲಿ ಬಿಳಿಬಣ್ಣ ಸಾಮಾನ್ಯ ಬಣ್ಣವಾಗಿದ್ದು ಒಂದು ಜೊತೆ ಪ್ರತಿರೂಪಿ ಜೀನ್‍ಗಳ ವರ್ತನೆಯಿಂದುಂಟಾಗುತ್ತದೆ. ಇವೆರಡನ್ನೂ ಸಾಂಕೇತಿಕವಾಗಿ ಅತಿ ಎಂದು ಕರೆಯೋಣ. ಆದ್ದರಿಂದ ಸಮಜೋಡಿ ಪ್ರತಿರೂಪಿಗಳ ಜೊತೆ ಅತಿ ಅತಿ ಆಗುತ್ತದೆ. ಹಳದಿ ಕರೆಂಟ್ಮಾತ್ ಒಂದು ಪೂರ್ವ ಮಾದರಿಯಾಗಿದ್ದು ಅದರ ಬಣ್ಣ ಸಮಜೋಡಿ ಪ್ರತಿರೂಪಿಗಳ ಜೊತೆಗಳಿಂದುಂಟಾಗಿರುತ್ತದೆ. ಪ್ರತ್ಯೇಕತೆಯ ಕಾಲದಲ್ಲಿ (ಸೆಗ್ರಗೇಷನ್) ಬಿಳಿಬಣ್ಣವಿರುವ ಕೀಟ ತನ್ನ ಪ್ರತಿಸಂಯೋಗ ಜೀವಕಣಕ್ಕೂ ಅತಿ ವನ್ನೇ ಕೊಟ್ಟಿರುತ್ತದೆ. ಅಂತೆಯೇ ಹಳದಿಬಣ್ಣದ ಕೀಟ ಅಥಿಯನ್ನು ನೀಡಿರುತ್ತದೆ. ಈ ಬಿಳಿ ಮತ್ತು ಹಳದಿಬಣ್ಣದ ಕೀಟಗಳೆರಡೂ ಸಂಯೋಗ ಹೊಂದುವಂತೆ ಮಾಡಬಹುದು. ಈ ಸಂಯೋಗದಲ್ಲಿ ಪ್ರಪ್ರಥಮವಾಗಿ ಭಾಗವಹಿಸುವ ಗಂಡು ಮತ್ತು ಹೆಣ್ಣು ಕೀಟಗಳನ್ನು ತಂದೆ ತಾಯಿಗಳ ಪೀಳಿಗೆ ಅಥವಾ P1 ಪೀಳಿಗೆ ಎಂದು ಕರೆಯುತ್ತಾರೆ. ಈ ಅಡ್ಡಹಾಯುವಿಕೆಯಲ್ಲಿ ಗಂಡು ಬೆಳ್ಳಗಿರಲಿ ಇಲ್ಲವೆ ಹಳದಿ ಬಣ್ಣದ್ದಾಗಿರಲಿ ಇಲ್ಲವೆ ಹೆಣ್ಣು ಕೀಟ ಹಳದಿಬಣ್ಣದ್ದೊ ಬಿಳಿಯದೊ ಇರಲಿ ಅದೇನೂ ಬಾಧಕ ವಿಚಾರವಾಗಿರುವುದಿಲ್ಲ. ಇದಾವುದರಲ್ಲೆ ಆಗಲಿ ಒಂದು ತರಹ ಕೀಟದಿಂದ ಬಂದ ಅಂಡಗಳನ್ನು ಇನ್ನೊಂದು ಬಣ್ಣದ ಕೀಟದಿಂದ ಬಂದ ರೇತ್ರಾಣುಗಳು ಗರ್ಭಾಂಕುರಗೊಳಿಸುವುದರಿಂದ ಮಿಶ್ರಜೋಡಿ ಪ್ರತಿರೂಪಿಗಳು (heಣeಡಿozಥಿgous ಚಿಟಟeಟomoಡಿಠಿhs) ಉದ್ಭವವಾಗುತ್ತವೆ. 

ಚಿತ್ರ-1

ಅತಿ, ಅಥಿ. ಈ ಅಡ್ಡಹಾಯುವಿಕೆಯಿಂದ ಉಂಟಾದ ಮರಿಗಳು ಮೊದಲನೆಯ ತಳಿಸಂತಾನ ಅಥವಾ ಈ1 ಪೀಳಿಗೆಯಾಗಿರುತ್ತದೆ. ಈ ಸಂತಾನ ತನ್ನ ಬಣ್ಣದಲ್ಲಿ ತಂದೆತಾಯಿಯರ ಬಣ್ಣವಾವುದನ್ನೂ ಹೋಲದೆ ಮಧ್ಯಸ್ಥ ನಸುಗೆಂಪು ಬಣ್ಣವನ್ನು ಹೊಂದಿರುತ್ತದೆ. ಇದಕ್ಕೆ ಬಿಳಿ ಮತ್ತು ಹಳದಿ ಬಣ್ಣ ನಿರ್ಧರಣಾಘಟಕಗಳು ಜೊತೆಗೂಡಿದ ವರ್ತನೆಯೇ ಕಾರಣ.
ಇಂಥ ಈ1 ಪೀಳಿಗೆಯ ಅಂತರತಳೀಕರಣದಿಂದ ಈ2 ಪೀಳಿಗೆಯ ಸಂತತಿ ಉತ್ಪತ್ತಿಯಾಗುತ್ತದೆ. ಈ ಈ2 ಸಂತತಿಯಲ್ಲಿ ಗಮನಿಸಬೇಕಾದ ಅನೇಕ ಸಂಗತಿಗಳಿವೆ. ಈ1 ಪೀಳಿಗೆಯಲ್ಲಿ ತಳೀಕರಣ ಪ್ರಯೋಗಕ್ಕೆ ಉಪಯೋಗಿಸಿರುವ ಎರಡು ಕೀಟಗಳಲ್ಲೂ ಮಿಶ್ರಜೋಡಿ ಪ್ರತಿರೂಪಿಗಳಾದ ಅತಿ ಅಥಿ ಗಳಿರುತ್ತದೆ. ಇದರಿಂದಲೇ ಇವುಗಳಿಂದ ಉತ್ಪತ್ತಿಯಾಗುವ ಅಂಡಗಳ ಮತ್ತು ರೇತ್ರಾಣುಗಳ ಅರ್ಧಭಾಗದಷ್ಟರಲ್ಲಿ ಅತಿ ಮತ್ತು ಇನ್ನು ಅರ್ಧದಲ್ಲಿ ಅಥಿ ಇರುತ್ತವೆ. ಇದರಿಂದ ಗರ್ಭಾಂಕುರತೆಯ ಕಾಲದಲ್ಲೂ ಅತಿ ಅಥವಾ ಅಥಿ ಇರುವ ಅಂಡಗಳೊಡನೆ ಅಥಿ ಅಥವಾ ಅತಿ ಇರುವ ರೇತಾಣುಗಳು ಸೇರುವುದಕ್ಕೆ ಸಮಾನ ಅವಕಾಶವಿರುತ್ತವೆ. ಅದ್ದರಿಂದಲೇ ಈ2 ಪೀಳಿಗೆಯಲ್ಲಿ ಅತಿ ಅತಿ ಮತ್ತು ಅಥಿ ಅಥಿ ಶುದ್ದ ಸಂತಾನಗಳ ಜೊತೆಗೆ ಮಿಶ್ರಸಂತಾನಗಳಾದ ಅತಿ ಅಥಿ, ಅಥಿ ಅತಿಗಳೂ ಇರುತ್ತವೆ.
ಈ ಫಲಿತಾಂಶಗಳು ಕಣೀಯ ಅನುವಂಶೀಯತೆಯ ನಿಯಮಗಳಿಗೆ ಬದ್ಧವಾಗಿದ್ದು ಸಮ್ಮಿಳಿತ ಅನುವಂಶೀಯತೆಗೆ ಪೂರ್ಣವಿರುದ್ಧವಾಗಿವೆ. ಎರಡು ಪ್ರತ್ಯೇಕ ಬಣ್ಣಗಳುಳ್ಳವನ್ನು ಅಡ್ಡಹಾಯಿಸಿದಾಗ ಒಂದೇ ತರಹದ ಈ1 ಪೀಳಿಗೆ ಉತ್ಪತ್ತಿಯಾಯಿತು. ಇವನ್ನು ಅಂತರತಳೀಕರಣಗೊಳಿಸಿದಾಗ ಬಂದ ಈ2 ಪೀಳಿಗೆ ಮೂರು ವಿಧದ ಕೀಟಗಳನ್ನು ಹೊಂದಿತ್ತು. ಅಂದರೆ ಅಂತರತಳೀಕರಣದಿಂದ ಬಂದ ಮೊಮ್ಮಕ್ಕಳು (ಈ2 ಪೀಳಿಗೆಯ ಕೀಟಗಳು) ಮಕ್ಕಳಿಗಿಂತ (ಈ1) ಹೆಚ್ಚು ಬದಲಾವಣೆಗಳನ್ನು ಹೊಂದಿದೆ ಎಂದಂತಾಯಿತು. ಈಗ ಕೆಂಪುಮಿಶ್ರಹಳದಿ ಬಣ್ಣವುಳ್ಳ ಹಾಗೂ ಮಿಶ್ರಜೋಡಿ ಪ್ರತಿರೂಪಿ ಜೀನ್‍ಗಳನ್ನು ಹೊಂದಿದ (ಅತಿ ಅಥಿ) ಕೀಟವನ್ನು ಸಮಜೋಡಿ ಪ್ರತಿರೂಪ ಜೀನ್‍ಗಳಿರುವ ಕೀಟವಾವುದಾದರೊಂದಕ್ಕೆ ಅಡ್ಡ ಹಾಯಿಸಿದಾಗ ಏನಾಗುತ್ತದೆ ಎಂದು ನೋಡೋಣ. ಅತಿ ಅಥಿ ಇರುವ ಕೆಂಪುಮಿಶ್ರ ಹಳದಿ ಬಣ್ಣದ ಕೀಟ ಸಮಸಂಖ್ಯೆಯಲ್ಲಿರುವ ಅತಿ , ಅಥಿ ಸಂಯೋಗ ಜೀವಕಣಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಸಮಜೋಡಿ (homozಥಿgous) ಪ್ರತಿರೂಪಿಗಳಿರುವ ಕೀಟ ಉತ್ಪತ್ತಿ ಮಾಡುವ ಇಲ್ಲ ಸಂಯೋಗಿ ಜೀವಕಣಗಳು ಒಂದೇ ರೀತಿಯವಾಗಿರುತ್ತವೆ. (ಎಲ್ಲವೂ ಅತಿ ಇಲ್ಲವೆ ಅಥಿ ಆಗಿರುತ್ತದೆ).
ಆದ್ದರಿಂದ ಈ1 ಪೀಳಿಗೆ ಸಮಸಂಖ್ಯೆಯಲ್ಲಿ ಎರಡು ತರದ ಕೀಟಗಳನ್ನು ಹೊಂದಿರುತ್ತದೆ (ಕೆಂಪುಮಿಶ್ರಹಳದಿ ಮತ್ತು ಬಿಳಿಯದು ಇಲ್ಲವೇ ಕೆಂಪುಮಿಶ್ರಹಳದಿ ಮತ್ತು ಕಡು ಹಳದಿ-ಇದು ಯಾವ ಸಮಜೋಡಿ ಪ್ರತಿರೂಪಿ ಜೀನ್‍ಗಳಿರುವ ಕೀಟವನ್ನು ಅಡ್ಡಹಾಯಿಸಲು ಉಪಯೋಗಿಸಲಾಗಿದೆ ಎಂಬುದನ್ನು ಅವಲಂಬಿಸಿರುತ್ತದೆ). ಇಲ್ಲಿ ಪ್ರತ್ಯೇಕತೆ ಎರಡು ವರ್ಗದ ಮರಿಗಳನ್ನು 1 : 1 ಪ್ರಮಾಣದಲ್ಲಿ ಉತ್ಪತ್ತಿಮಾಡಲು ಅವಕಾಶಮಾಡಿಕೊಡುತ್ತವೆ. ಇಂಥ ಅಡ್ಡಹಾಯುವಿಕೆಗೆ ಹಿಮ್ಮೊಗ ಅಡ್ಡಹಾಯಿಕೆ (ಬ್ಯಾಕ್ ಕ್ರಾಸ್) ಎಂದು ಹೆಸರು. ಇದರಲ್ಲಿ ಯಾವಾಗಲೂ ಎರಡು ವಿಧದ ಕೀಟಗಳೂ ಸಮಪ್ರಮಾಣದಲ್ಲಿರುತ್ತವೆ.

ಚಿತ್ರ-2

 ಪ್ರಾಬಲ್ಯ (ಡಾಮಿನೆನ್ಸ್) : ಇಲ್ಲಿ ಒಂದು ಸಣ್ಣ ತೊಡಕಾದ ಸಮಸ್ಯೆಯನ್ನು ಸೇರಿಸಬೇಕಾಗಿದೆ. ಕೆಂಪು ಮತ್ತು ನೇರಳೇಬಣ್ಣದ ಹೂಗಳನ್ನು ಬಿಡುವ ಬಟಾಣಿಗಳನ್ನು ನಾವು ಅಡ್ಡಹಾಯಿಸಿದರೆ ಈ1 ಪೀಳಿಗೆಯವೆಲ್ಲ ತಮ್ಮ ಹಿಂದಿನ ಪೀಳಿಗೆಯ ಒಂದು ಗಿಡದಂತೆ ನೇರಳೆಬಣ್ಣದ ಹೂಗಳನ್ನು ಹೊಂದಿರುತ್ತದೆ. ಈ ಈ1 ಪೀಳಿಗೆಯವನ್ನು (ಮಿಶ್ರಜೋಡಿ ಪ್ರತಿರೂಪಿಗಳಿರುವುವು) ಅಂತರತಳೀಕರಣಗೊಳಿಸಿದಾಗ ಉತ್ಪತ್ತಿಯಾಗುವ ಪೀಳಿಗೆಯಲ್ಲಿ 3 : 1 ಪ್ರಮಾಣದಲ್ಲಿ ನೇರಳೇ ಮತ್ತು ಕೆಂಪುಬಣ್ಣವಿರುತ್ತವೆ. ಇದನ್ನು ನೋಡಿದ ತತ್‍ಕ್ಷಣವೇ ಕೆಲವರು ಈ ಪ್ರಮಾಣ ಮಾರ್ಪಾಟು ಹೊಂದಿದ 1 : 2 : 1 ಪ್ರಮಾಣವಿರಬಹುದು ಎಂದು ಅನುಮಾನ ಪಡಬಹುದು. ಇಲ್ಲಿ ಮಿಶ್ರಜೋಡಿ ಪ್ರತಿರೂಪಗಳಿರುವ ನೇರಳೆಬಣ್ಣದ ವುಗಳಿಂದ ಪ್ರತ್ಯೇಕಿಸಲಾಗುವುದಿಲ್ಲ. ಇದನ್ನು ಪರಿಶೀಲಿಸಿ ಪರೀಕ್ಷಿಸಲು ನಾವು ಈ2 ಪೀಳಿಗೆಯ ನೇರಳೆಬಣ್ಣದ ಅನೇಕ ಗಿಡಗಳನ್ನು ಕೆಂಪು ಹೂಬಿಡುವ ಗಿಡಗಳೊಡನೆ ಅಡ್ಡಹಾಯಿಸಬಹುದು. ಆಗಲೂ ಕೂಡ 1/3 ಭಾಗ ಬರಿ ನೇರಳೇಬಣ್ಣವನ್ನೂ ಮತ್ತು ಉಳಿದ 2/3 ಭಾಗದವು 1 ನೇರಳೆ ಮತ್ತು 1 ಕೆಂಪು-ಈ ಸಮಪ್ರಮಾಣದಲ್ಲಿ ಉತ್ಪತ್ತಿಮಾಡುತ್ತವೆ. ಆದ್ದರಿಂದ ಸ್ಪಷ್ಟವಾಗಿಯೇ ಈ2 ಪೀಳಿಗೆಯ ಎಲ್ಲ ನೇರಳೆ ಬಣ್ಣದವುಗಳ ದೇಹಪ್ರಕೃತಿ (ಕಾನ್ಸ್‍ಟಿಟ್ಯೂಷನ್) ಒಂದೇ ತೆರನಾಗಿರುವುದಿಲ್ಲ. ಇವುಗಳಲ್ಲಿ 1/3 ಭಾಗ ಸಮಜೋಡಿಗಳನ್ನು ಹೊಂದಿದ್ದು ಕೆಂಪಿನವುಗಳೊಡನೆ ಅಡ್ಡಹಾಯಿಸಿದಾಗ ಮಿಶ್ರಜೋಡಿಗಳುಳ್ಳ (heಣeಡಿozಥಿgous) ನೇರಳೆಬಣ್ಣದ ಹೂಗಳುಳ್ಳ ಗಿಡಗಳನ್ನೇ ಉತ್ಪತ್ತಿಮಾಡುತ್ತವೆ. ಆದರೆ ಉಳಿದ 2/3 ಭಾಗದವುಗಳು ಮಿಶ್ರಜೋಡಿಗಳಾಗಿದ್ದು ಕೆಂಪಿನವುಗಳೊಡನೆ ಇವುಗಳ ಅಡ್ಡಹಾಯಿವಿಕೆ ಬ್ಯಾಕ್‍ಕ್ರಾಸ್‍ನಂತಿದ್ದು ಇದರಲ್ಲಿ ಮಿಶ್ರಜೋಡಿಗಳುಳ್ಳ ನೇರಳೇಯವು ಮತ್ತು ಕೆಂಪುಹೂಬಿಡುವ ಸಮಜೋಡಿಯುಳ್ಳ ಬಟಾಣಿ ಗಿಡಗಳು 1 : 1 ಪ್ರಮಾಣಗಳಲ್ಲಿ ಉತ್ಪತ್ತಿಯಾಗುತ್ತವೆ.
ಈ ಪ್ರಸಂಗದ ಮುಖ್ಯಗುಣವಾಗಿ ಮಿಶ್ರಜೋಡಿಗಳಲ್ಲಿ ಉತ್ಪತ್ತಿಯಾಗುವ ನೇರಳೇಬಣ್ಣದ ಪುಷ್ಪವರ್ಣವನ್ನು ಪ್ರಬಲಗುಣ (ಡಾಮಿನೆಂಟ್) ಎಂದೂ ಮಿಶ್ರಜೋಡಿಯುಳ್ಳ ಗಿಡದಲ್ಲಿ ಅಡಗಿರುವ, ತಡೆಹಿಡಿಯಲ್ಪಟ್ಟಿರುವ ಕೆಂಪುಬಣ್ಣದ ಗುಣವನ್ನು ಅಬಲಗುಣ (ರಿಸೆಸಿವ್) ಎಂದೂ ಕರೆಯುತ್ತಾರೆ. ಪ್ರಾಬಲ್ಯದ ಈ ಚಮತ್ಕಾರ ಮೆಂಡಲ್‍ನ ಅನುವಂಶೀಯತೆಯಲ್ಲಿ ಚಿಕ್ಕದಾದರೂ ಅತಿ ಪ್ರಾಮುಖ್ಯವಿರುವ ವಿಷಯ.

ಸ್ವತಂತ್ರ ವಿಂಗಡನೆ (ಇಂಡಿಪೆಂಡೆಂಟ್ ಅಸಾರ್ಟ್‍ಮೆಂಟ್): ಒಂದು ಜೊತೆ ಪ್ರತಿರೂಪಿಗಳ ವರ್ತನೆ ಇತರ ಪ್ರತಿರೂಪಿಗಳ ವರ್ತನೆಯಿಂದ ಸ್ವತಂತ್ರವಾಗಿರುತ್ತದೆ ಎಂದು ಮೆಂಡಲ್ ಹೇಳಿದ್ದಾನೆ. ಮೆಂಡಲ್‍ನ ಈ ಸೂತ್ರವನ್ನು ನಿರೂಪಿಸಲು ಮೊಲದಲ್ಲಿ ಎರಡುಜೊತೆ ಪ್ರತಿರೂಪಿಗಳ ವರ್ತನೆಯನ್ನು ಅಭ್ಯಸಿಸಬಹುದು. ಈ ಮೊಲಗಳಲ್ಲಿ ಕಪ್ಪುಬಣ್ಣಕ್ಕಿಂತ ಸಾಮಾನ್ಯವರ್ಣವಾದ ಕಂದುಬಣ್ಣದ್ದು ಪ್ರಾಬಲ್ಯ ಹೊಂದಿರುತ್ತದೆ. ಚಿಕ್ಕ ತುಪ್ಪಳವಿರುವುದು ಅಂಗೋರ ತುಪ್ಪಳದ ಮೇಲೆ ಪ್ರಾಬಲ್ಯಹೊಂದಿರುತ್ತದೆ. ಒಂದು ಸಾಮಾನ್ಯ ಮೊಲವನ್ನು (ಕಂತು ಮತ್ತು ಗಿಡ್ಡತುಪ್ಪಲವುಳ್ಳದ್ದು) ಕಪ್ಪು ಅಂಗೋರ ತುಪ್ಪಳವಿರುವ ಮೊಲದೊಡನೆ ಅಡ್ಡಹಾಯಿಸಿದಾಗ ಎಲ್ಲ ಮರಿಗಳೂ (ಈ1) ಸಾಮಾನ್ಯ ಮೊಲಗಳಂತೆಯೇ ಇರುತ್ತವೆ. ಆದರೆ ಈ ಈ1 ಸಂತತಿಯ ಮೊಲಗಳನ್ನೇ ಅಂತರತಳೀಕರಣಗೊಳಿಸಿದಾಗ ಕಪ್ಪು ಮತ್ತು ಗಿಡ್ಡ ಕೂದಲಿನ ಗುಣಗಳು ಗಿಡ್ಡ ತುಪ್ಪಳ ಮತ್ತು ಅಂಗೋರದಂತೆಯೇ 3 : 1 ಪ್ರಮಾಣದಲ್ಲಿ ಪ್ರತ್ಯೇಕತೆ ಹೊಂದುತ್ತವೆ. ಇವೆರಡು ಪ್ರಮಾಣಗಳೂ ಸ್ವತಂತ್ರವಾಗಿಯೇ ಇರುತ್ತವೆ. ಆದ್ದರಿಂದ ಈ2 ಪೀಳಿಗೆಯಲ್ಲಿ 9 : 3 : 3 : 1 ಪ್ರಮಾಣವಿರುತ್ತದೆ. ಇವುಗಳಲ್ಲಿ 9 ಕಂದುಬಣ್ಣದ ಗಿಡ್ಡ ತುಪ್ಪಳದವುಗಳೂ ಅಂಗೋರಗಳೂ 3 ಕಂದುಬಣ್ಣದ ಅಂಗೋರಗಳೂ 3 ಕಪ್ಪುಬಣ್ಣದ ಗಿಡ್ಡ ತುಪ್ಪಳ ಹೊಂದಿದವುಗಳೂ 1 ಕಪ್ಪು ಅಗೋರವೂ ಇರುತ್ತವೆ. ಆದ್ದರಿಂದ ಎರಡೂ ಪ್ರಬಲ ಗುಣಗಳಿರುವ ಪ್ರಾಣಿಗಳು ಸಾಮಾನ್ಯ. ಆದರೆ ಎರಡೂ ದುರ್ಬಲ ಇಲ್ಲವೆ ಅಪ್ರಬಲಗುಣಗಳುಳ್ಳವುಗಳು ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ. ಇವೆರಡೂ ಇವುಗಳ ಅಜ್ಜಂದಿರುಗಳ ವಿಧದವೇ ಆಗಿರುತ್ತವೆ. ಆದ್ದರಿಂದ ಇವನ್ನು ಪುನಃ ಸಂಯೋಗವಾಗದ ವರ್ಗದವು (ನಾನ್‍ಡಿಕಾಬಿನೇಷನ್ ಕ್ಲಾಸ್) ಎಂದು ಕರೆಯುತ್ತಾರೆ. ಆದರೆ ಈ ಸಂಯೋಜನೆಗಳೇ (ಕಾಬಿನೇಷನ್ಸ್) ಹೊಸರೀತಿಯಲ್ಲಿ ಪುನಃ ಸಂಯೋಜನೆ ಹೊಂದಿ ಕಪ್ಪು ಗಿಡ್ಡ ತುಪ್ಪಳ ಮತ್ತು ಕಪ್ಪು ಅಂಗೋರ ವಿಧಗಳು ಉತ್ಪತ್ತಿಯಾಗುವುದಕ್ಕೆ ಅವಕಾಶ ಮಾಡಿಕೊಟ್ಟಿವೆ. ಇವನ್ನು ಪುನರ್‍ಸಂಯೋಜನೆಗಳು (ರಿಕಾಂಬಿನೇಷನ್ಸ್) ಎಂದು ಕರೆಯುತ್ತಾರೆ.
ಎರಡು ಸೂತ್ರಗಳ ಮೂಲಕ ಮೆಂಡಲ್ ತನ್ನ ಪ್ರಯೋಗಗಳ ಸಾರಾಂಶವನ್ನೇ ಕೊಟ್ಟಿದ್ದಾನೆ. ಇದರಲ್ಲಿ ಮೊದಲನೆಯದು ಹಿಂದೆಯೇ ತಿಳಿಸಿದಂತೆ ಪ್ರತ್ಯೇಕತೆಯ ನಿಯಮ (ಲಾ ಆಫ್ ಸೆಗ್ರಗೇಷನ್). ಎರಡನೆಯದು ಸ್ವತಂತ್ರವಿಂಗಡನೆಯ ನಿಯಮ (ಲಾ ಆಫ್ ಇಂಡಿಪೆಂಡೆಂಟ್ ಅಸಾರ್ಟ್‍ಮೆಂಟ್). ದುರಾದೃಷ್ಟವಶಾತ್ ಮೆಂಡಲ್ ಈ ನಿಯಮವನ್ನು ಬರೆದಾಗ ಜೀನ್‍ಗಳು ಹೇಗೆ ಹೊಗುತ್ತವೆಂಬ ವಿಚಾರವಾಗಲೀ ಪ್ರತ್ಯೇಕತೆ ಹೇಗೆ ಆಗುತ್ತದೆ ಎಂಬುದರ ಸ್ಪಷ್ಟಕಲ್ಪನೆಯಾಗಲಿ ಇರಲಿಲ್ಲ. ಅವನ ಕಾರ್ಯವನ್ನು ಪುನಃ ಕಂಡುಹಿಡಿದು ಅದರ ಮಹತ್ತ್ವವನ್ನು ಕಂಡುಕೊಳ್ಳುವ ಮೊದಲೇ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿದ್ದು ನಿಜಕ್ಕೂ ಒಂದು ಪ್ರಶಂಸನಾರ್ಹ ಸಂಗತಿ. ಈ ಮಾಹಿತಿಗಳ ಸಂಕ್ಷಿಪ್ತವಿವರಣೆಗಳನ್ನು ಇಲ್ಲಿ ಕೊಡಬಹುದು.
ವರ್ಣತಂತುಗಳು (ಕ್ರೊಮೊeóÉೂೀಮ್ಸ್) ಮತ್ತು ಜೀನ್‍ಗಳು: ಪ್ರತಿ ಕಣ ಬೀಜದಲ್ಲೂ ಸೂಕ್ಷ್ಮದರ್ಶಕದಲ್ಲಿ ನೋಡಬಹುದಾದ ಕೆಲವು ವರ್ಣತಂತುಗಳಿರುತ್ತವೆ. ಈ ವರ್ಣತಂತುಗಳ ಆಕಾರ ಅವಿರುವ ಸ್ಥಿತಿಗಳನ್ನು ಅವಲಂಬಿಸಿದ್ದರೂ ಅವುಗಳ ಸಂಖ್ಯೆ ಒಂದು ಪ್ರಭೇದದ ಪ್ರಾಣಿಗಳಲ್ಲೆಲ್ಲ ನಿಖರವಾಗಿರುತ್ತದೆ. ದೇಹದ ಪ್ರತಿಯೊಂದು ಜೀವಕಣದಲ್ಲೂ ಅವು ಜೋಡಿಗಳಾಗಿ ಇರುತ್ತವೆ. ಸಂಯೋಗಿ ಜೀವಕಣಗಳು ಉತ್ಪತ್ತಿಯಾಗುವ ಕಾಲದಲ್ಲಿ ಈ ಸಮಜೋಡಿಗಳ ವರ್ಣತಂತುಗಳು ಬೇರ್ಪಟ್ಟು ಪ್ರತ್ಯೇಕತೆ ಹೊಂದಿರುತ್ತವೆ. ಆದ್ದರಿಂದ ಸಂಯೋಗಿ ಜೀವಕಣಗಳಲ್ಲಿ ಯಾವಾಗಲೂ ಜೀವಿಯ ಒಟ್ಟು ವರ್ಣತಂತುಗಳ ಸಂಖ್ಯೆಯ ಅರ್ಧದಷ್ಟು ವರ್ಣತಂತುಗಳು ಮಾತ್ರ ಇರುತ್ತವೆ. ಅಂಡ ಮತ್ತು ವೀರ್ಯಾಣುಗಳು ಗರ್ಭಾಂಕುರವಾಗುವಾಗ ಅಂಡವೀರ್ಯಜಂತುವಿನೊಡನೆ ಸಂಯೋಗಹೊಂದಿದ ಮೇಲೆ ಮೊದಲಿನ ಒಟ್ಟು ವರ್ಣತಂತುಗಳ ಸಂಖ್ಯೆಯೇ ಸ್ಥಾಪಿತವಾಗುತ್ತದೆ.
ಮೆಂಡಲ್‍ನ ನಿಯಮಗಳನ್ನು ಪುನಃ ಪರಿಶೀಲಿಸಿದಾಗ ಕಣ ಬೀಜದಲ್ಲಿರುವ ಜೀನ್‍ಗಳ ವರ್ತನೆ ಹಾಗೂ ವರ್ಣರೇಖೆಗಳ ವರ್ತನೆ, ಇವುಗಳಿಗಿರುವ ಸಮಾನಾಂತರತೆ ಕಳೆದುಕೊಳ್ಳದಷ್ಟು ಸ್ಪಷ್ಟವಾಗಿತ್ತು. ಸಟ್ಟನ್ ಎಂಬ ವಿಜ್ಞಾನಿ ಇದಾದ ಒಂದು ವರ್ಷದಲ್ಲಿ ಈ ವಿಷಯದ ಬಗ್ಗೆ ಎಲ್ಲರ ಗಮನ ಸೆಳೆದು ನಾವು ಈಗ ತಿಳಿದಿರುವಂತೆ ವರ್ಣತಂತುಗಳು ಅನವಂಶೀಯ ವಸ್ತುವನ್ನು ಒಯ್ಯುವ ವಾಹನಗಳು ಎಂದು ಸ್ಪಷ್ಟವಾಗಿ ಸೂಚಿಸಿದ. ಜೀನ್‍ಗಳು ಮತ್ತು ವರ್ಣತಂತುಗಳು ಬೇರೆ ಬೇರೆಯಾಗುತ್ತವೆ. ಆದ್ದರಿಂದ ಒಟ್ಟು ಸಂಖ್ಯೆಯ ಅರ್ಧ ಅಂದರೆ ಜೋಡಿಗೆ ಒದೊಂದರಂತೆ ಪ್ರತಿ ಸಂಯೋಗಿ ಜೀವಕ್ಕೂ ವರ್ಣತಂತುಗಳು ಬಂದಿರುತ್ತವೆ. ಒಟ್ಟು ಜೀನ್ ಹಾಗೂ ಮರ್ಣತಂತುಗಳ ಸಂಖ್ಯೆಯ ಸಹಜಸ್ಥಿತಿ ಗರ್ಭಾಂಕುರತೆಯಿಂದ ಪೂರ್ಣವಾಗುತ್ತದೆ.
ಲಿಂಕೇಜ್ ಮತ್ತು ಅಡ್ಡಹಾಯುವಿಕೆ: ವರ್ಣತಂತುಗಳಲ್ಲಿ ಜೀನ್‍ಗಳಿರುವುದರಿಂದ ಪ್ರತಿ ವರ್ಣತಂತುವಿನಮೇಲೂ ಅನೇಕ ಜೀನ್‍ಗಳಿರಬಹುದು ಎಂಬುದು ಸೂಚ್ಯಸಂಗತಿ. ಒಂದೇ ಈ ವರ್ಣತಂತುವಿನ ಮೇಲಿರುವ ಜೀನ್ಗಳು ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಮತ್ತು ಈ ಜೀನ್‍ಗಳು ತಂದೆತಾಯಿಯರಿಂದ ಮುಂದಿನ ಸಂತತಿಗೆ ಒಟ್ಟಾಗಿ ಸಾಗಿಸಲ್ಪಡುತ್ತವೆ. ಜೀನ್‍ಗಳ ಈ ಸಾಹಚರ್ಯೆಯ ಹೆಸರು ಲಿಂಕೇಜ್. 1909ರಲ್ಲಿ ಟಿ.ಎಚ್. ಮೋರ್ಗನ್ ಅಡ್ಡಹಾಯುವಿಕೆಯ ಸಿದ್ಧಾಂತವನ್ನು ಮಂಡಿಸಿದ. ಅವನ ಹೇಳಿಕೆಯ ಪ್ರಕಾರ ಒಂದೇ ವರ್ಣರೇಖೆಯ ಬೇರೆ ಬೇರೆ ಜಾಗಗಳಲ್ಲಿ ಂ ಮತ್ತು ಃ ಗಳೆಂಬ ಎರಡು ಜೀನ್‍ಗಳಿದ್ದರೆ ಅವು ಸಾಮಾನ್ಯವಾಗಿ ಅನುಗತವಾಗಿ ಬರುವ ಕೋಶಗಳ ಒಂದೇ ವರ್ಣತಂತುಗಳಲ್ಲೇ ಒಟ್ಟಾಗಿ ಇರುತ್ತವೆ. ಆದರೆ ಕೆಲವುವೇಳೆಗಳಲ್ಲಿ ವರ್ಣತಂತು ಒಡೆಯುವಿಕೆ ಮತ್ತು ಮತ್ತೆ ಕೂಡುವಿಕೆಗಳ ಪರಿಣಾಮದಿಂದ ಎರಡು ಜೀನ್‍ಗಳು ಬೇರ್ಪಡಬಹುದು. ಹೀಗಾಗುವುದರಿಂದ ಂ ಜೀನ್ ಒಂದು ವರ್ಣರೇಖೆಯಲ್ಲೂ ಃ ಮತ್ತೊಂದರಲ್ಲೂ ಸೇರಿಕೊಳ್ಳುವ ಅವಕಾಶವಿರುತ್ತದೆ. ಆದ್ದರಿಂದ ಒಂದು ಜೀವಿ ಎರಡು ಮಿಶ್ರಜೋಡಿ ಸಂಬಂಧಕ ಜೀನ್‍ಗಳನ್ನು ಹೊಂದಿದ್ದರೆ (ಂಃ/ಚಿb) ಅದರ ಅನೇಕ ಸಂಯೋಗಿಜೀವಕಣಗಳು ಂಃ ಅಥವಾ ಚಿb ಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಕೆಲವು ಸಂಯೋಗಿ ಜೀವಕಣಗಳು ಅಡ್ಡಹಾದ ವಿಧಗಳಾಗಿದ್ದು ಂb ಅಥವಾ ಚಿಃ ಗಳಾಗಿರುತ್ತದೆ. ಇಂಥವು ಹೊಸ ಜೀವಿಗಳ ಉದ್ಭವಕ್ಕೆ ಕಾರಣಕರ್ತೃಗಳಾದರೆ ಅವು ಉತ್ಪತ್ತಿಮಾಡುವ ಹೊಸ ಲಕ್ಷಣಗಳ ಜೊತೆಗಳಿಂದ ಅವನ್ನು ಗುರುತಿಸಬಹುದು.

ಡ್ರಾಸೊಫಿಲ ಕೀಟದಲ್ಲಿ ಮಾಸಲು ಕೆಂಪುಗಣ್ಣು (ರೂಬಿ ಐ. ಡಿb) ಹರಿದ ರೆಕ್ಕೆ (ಕಟ್‍ವಿಂಗ್, ಛಿಣ) ಮತ್ತು ಸಿಂಧೂರವರ್ಣದ ಕಣ್ಣು (ವರ್ಮಿಲಿಯನ್ ಐ. v) ಮುಂತಾದ ಮೂರು ಜೀನ್‍ಗಳ ಏಕಕಾಲಿಕ ಅನುವಂಶೀಯತಾಪರಿಯನ್ನು ಸಿ.ಬಿ. ಬ್ರಿಡ್ಜಸ್ ಅಭ್ಯಸಿಸಿದ. ಇವುಗಳ ಅಡ್ಡಹಾಯಿಕೆಯ ಮೌಲ್ಯ ಈ ರೀತಿ ಇತ್ತು. ಡಿb ಮತ್ತು ಛಿಣ ಗಳ ಮಧ್ಯೆ 16.7%, ಛಿಣ ಮತ್ತು v ಗಳ ನಡುವೆ 14.5% ಡಿb ಮತ್ತು v ಗಳ ನಡುವೆ 31.2%. ಆದ್ದರಿಂದ ವರ್ಣರೇಖೆಯ ಮೇಲೆ ಈ ಮೂರು ಜೀನ್‍ಗಳ ನಕ್ಷೆಯನ್ನು ಹೀಗೆ ಮಾಡಬಹುದಾಗಿದೆ.

ಚಿತ್ರ-3

ಲಿಂಕೇಜ್ ವಿಷಯವಾಗಿ ಡ್ರಾಸೊಫಿಲ ಕೀಟದಲ್ಲಿ ಬಹಳ ಅಧ್ಯಯನ ನಡೆದಿದೆ. ಈ ಕೀಟದಲ್ಲಿ ಮೂರು ದೊಡ್ಡ ಲಿಂಕೇಜ್ ಗುಂಪುಗಳಿದ್ದು (ಇವುಗಳಲ್ಲಿ ಒಂದು ಲಿಂಗಸಂಬಂಧಕವಾದದ್ದು, ಸೆಕ್ಸ್‍ಲಿಂಕ್ಸ್) ನಾಲ್ಕನೆಯದು ಒಂದು ಸಣ್ಣ ಗುಂಪಾಗಿದೆ. ಒಂದು ಹೊತ್ತಾದ ಭಾಗದಲ್ಲಿ ಅಡ್ಡಹಾಯುವಿಕೆ ನಡೆದರೆ ಅದು ಸಾಮಾನ್ಯವಾಗಿ ವರ್ಣತಂತುಗಳ ಜೋಡಿಯ (ಬೈವೇಲೆಂಟ್) ನಾಲ್ಕರಲ್ಲಿ ಎರಡು ಎಳೆಗಳನ್ನು (ಸ್ಟ್ರಾಂಡ್ಸ್) ಮಾತ್ರ ಅವಲಂಭಿಸಿರುತ್ತದೆ ಎಂದು ತಿಳಿದುಬಂದಿದೆ. ಈ ನಾಲ್ಕರಲ್ಲಿ ಎರಡು ಅಡ್ಡಹಾಯಿಕೆಗಳನ್ನು ಹೊಂದಿದ್ದು ಇನ್ನೆರಡರಲ್ಲಿ ಅಡ್ಡಹಾಯಿಕೆಗಳಿರುವುದಿಲ್ಲ.
ಅನೇಕ ಜೀವಗಳ ವಿವರಣಾತ್ಮಕ ವರ್ಣರೇಖಾನಕ್ಷೆಗಳನ್ನು ಈಗಾಗಲೆ ರಚಿಸಲಾಗಿದೆ. ಡ್ರಾಸೊಫಿಲಮೆನೊಗ್ಯಾಸ್ಟರ್ ಬಗ್ಗೆ ಅತಿವಿವರವಾದ ನಕ್ಷೆಯನ್ನು ಮಾಡಲಾಗಿದೆ. ಈ ಜೀವಿಯ ಸಲೈವರಿ ಗ್ರಂಥಿಗಳಲ್ಲಿ ದೊಡ್ಡ ವರ್ಣರೇಖೆಗಳಿರುವುದೇ (ಜೈಂಟ್ ಕ್ರೊಮೊಸೋóಮ್ಸ್) ಇದಕ್ಕೆ ಮುಖ್ಯಕಾರಣ. ಆದ್ದರಿಂದ ಕೋಶಾನುವಂಶೀಯತೆಯ ವಿಜ್ಞಾನಿಗಳಿಗೆ ಜೀನ್‍ಗಳ ನಿರ್ದಿಷ್ಟ ಜಾಗಗಳನ್ನು ಸರಿಯಾಗಿ ಗುರುತಿಸಿ ನಕ್ಷೆ ಮಾಡಲು ಅನುಕೂಲವಾಯಿತು. ಮುಸುಕಿನ ಜೋಳದಲ್ಲಿ ಹೆಚ್ಚು ವರ್ಣತಂತುವಿನ ನಕ್ಷೆಗಳನ್ನು ಮಾಡಲಾಗಿದೆ. ಈ ಸಸ್ಯದಲ್ಲಿ 10 ಲಿಂಕೇಜ್ ಗುಂಪುಗಳಿವೆಯೆಂದು ತಿಳಿದುಬಂದಿದೆ.
ವರ್ಣತಂತುಗಳ ಸಂಖ್ಯೆ ಅಧಿಕವಾಗಿರುವ ಜೀವಿಗಳಲ್ಲಿ ಲಿಂಕೇಜ್ ಬಗ್ಗೆ ಸಂಶೋಧನೆ ನಡೆಸುವುದು ಬಹು ಪ್ರಯಾಸದ ಕೆಲಸ. ಮಾನವವರ್ಗದಲ್ಲಂತೂ ಇದು ಅತಿ ಕ್ಲಿಷ್ಟ ಎನಿಸಿದೆ. ಮಾನವನಲ್ಲಿ ಕೆಲವು ಅಪೂರ್ವ ಜೀನ್‍ಗಳು ಸಂಬಂಧಕ ಜೀನ್‍ಗಳಾಗಿವೆ (ಲಿಂಕ್ಡ್‍ಜೀನ್ಸ್) ಎಂಬ ಅನುಮಾನವಿದ್ದರೂ ಇದನ್ನು ಸ್ಥಿರೀಕರಿಸುವ ಕಾರ್ಯ ಯಶಸ್ವಿಯಾಗಿಲ್ಲ. ಮಾನವನನ್ನು ಪ್ರಯೋಗಶಾಲೆಯ ಇಲಿ, ಮೊಲಗಳಂತೆ ಕೋಶಶಾಸ್ತ್ರಜ್ಞರು ಬಳಸಿಕೊಳ್ಳಲಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ಸೂಕ್ಷ್ಮದರ್ಶಕದ ಸಹಾಯದಿಂದ ವರ್ಣತಂತುಗಳ ವರ್ತನೆಗಳ ಅಭ್ಯಾಸ, ತಳೀಕರಣ ಪ್ರಯೋಗಗಳಿಂದ ಬರುವ ಲಿಂಕೇಜ್ ಗುಂಪುಗಳ ಅನಾಮಿಕ ಅಭಿಪ್ರಾಯ ಇವು ವರ್ಣತಂತುಗಳ ಅನುವಂಶೀಯತಾ ವಾದಕ್ಕೆ ಒಳ್ಳೆಯ ಆಧಾರಗಳನ್ನೊದಗಿಸುತ್ತದೆ. ಇದಕ್ಕೆ ಇನ್ನೂ ಹೆಚ್ಚಿನ ಆಧಾರಗಳು ವರ್ಣತಂತುಗಳ ಕೆಲವು ರಚನಾ ಪರಿವರ್ತನೆಯಿಂದಲೂ ಅವುಗಳ ಪರಿಣಾಮವಾಗಿ ಆಗುವ ಆವರಣ ತಂತುವಿನ ಮೇಲಿನ ಜೀನ್‍ಗಳ ಬದಲಾದ ವರ್ತನೆಯಿಂದಲೂ ದೊರೆಯುತ್ತವೆ. ವರ್ಣತಂತುವಿನ ರಚನಾ ಪರಿವರ್ತನೆಗಳಲ್ಲಿ ಪ್ರಕೃತಿಯಲ್ಲೆ ನ್ಯೂನತೆ, ವಿಪರ್ಯಾಸ (ಇನ್ವರ್ಷನ್), ದ್ವಿಪ್ರತಿಯಾಗುವಿಕೆ, ವರ್ಣತಂತು ಭಾಗಗಳ ಸ್ಥಳಾಂತರ ಕಾರ್ಯ ಇವೆಲ್ಲ ಸಂಭವಿಸುವುದು ಕಂಡುಬಂದಿದೆ.

ಲಿಂಗಸಂಬಂಧ ಅನುವಂಶೀಯತೆ: ಲೈಂಗಿಕ ವರ್ಣತಂತುಗಳಾದ ಘಿ ಮತ್ತು ಙ ವರ್ಣತಂತುಗಳಲ್ಲಿ ಲಿಂಗನಿಯಂತ್ರಣದ ಜೀನ್‍ಗಳೇ ಅಲ್ಲದೆ ಬೇರೆಯವೂ ಇರುತ್ತವೆ. ಆದ್ದರಿಂದ ಇವು ಲಿಂಗಸ್ಥಿತಿಗೆ ಸಂಬಂಧಿಸಿಕೊಂಡೇ ಯಾಂತ್ರಿಕವಾಗಿ ಒಯ್ಯಲ್ಪಡುತ್ತದೆ. ಇವು ಒಂದೇ ವರ್ಣತಂತುವಿನಲ್ಲಿರುವುದರಿಂದ ಲಿಂಗನಿರ್ಧಾರಕ ಜೀನ್‍ಗಳೊಂದಿಗೆ ಸಂಬಂಧಹೊಂದಿರುತ್ತದೆ. ಲೈಂಗಿಕ ವರ್ಣರೇಖೆಗಳಲ್ಲಿ ಜೀನ್‍ಗಳ ಅನುವಂಶೀಯತೆಯ ಬಗ್ಗೆ ನಾವು ಅಭ್ಯಾಸಮಾಡುವಾಗ ವ್ಯಕ್ತಿಯ ಲಿಂಗವಾವುದು ಎಂಬುದೇ ಪ್ರಮುಖ ವಿಷಯವಾಗುತ್ತದೆ. 

ಗಂಡಸಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಆತನ ಘಿ ವರ್ಣತಂತು-ಅವನ ಎಲ್ಲ ಹೆಣ್ಣುಮಕ್ಕಳಿಗೂ ಬರುವುದಾದರೂ ಗಂಡುಮಕ್ಕಳಿಗೆ ಬರುವುದಿಲ್ಲ. ಹೆಣ್ಣುಮಕ್ಕಳ ಇನ್ನೊಂದು ಙ ವರ್ಣತಂತು ತಾಯಿಯಿಂದ ಬರುತ್ತದೆ. ಆದ್ದರಿಂದ ಒಬ್ಬ ತಂದೆಯಲ್ಲಿ ಏನಾದರೂ ಒಂದು ಲಿಂಗಸಂಬಂಧವಾದ ದುರ್ಬಲಗುಣವೇನಾದರೂ ಇದ್ದು, ತಾಯಿ ಸಾಧಾರಣ ಸಾಮಾನ್ಯಸ್ಥಿತಿಯವಳಾಗಿದ್ದಲ್ಲಿ ತಂದೆಯ ಆ ಗುಣ ಹೆಣ್ಣುಮಕ್ಕಳಲ್ಲಿ ಎದ್ದು ಕಾಣುವುದಿಲ್ಲ. ಆದರೆ ಇವರ ಗಂಡುಮಕ್ಕಳಲ್ಲಿ ಅರ್ಧದಷ್ಟು ಮಂದಿಗೆ ಈ ಗುಣ ಬಂದೇ ಬರುತ್ತದೆ. ಮಾನವಪೀಳಿಗೆಯಲ್ಲಿ ಕಂಡುಬರುವ ಬಣ್ಣ ಕುರುಡುತನ (ಕಲರ್ ಬ್ಲೈಂಡ್‍ನೆಸ್) ಈ ರೀತಿಯ ಒಂದು ಗುಣವಾಗಿದೆ. ಬಣ್ಣ ಕುರುಡುತನವಿರುವ ಒಬ್ಬ ಗಂಡಸು ಸಹಜದೃಷ್ಟಿಯ ಯುವತಿಯೊಬ್ಬಳನ್ನು ಮದುವೆಯಾದರೆ ಆ ಲಿಂಗಸಂಬಂಧ ಜೀನ್ ವರ್ತನೆ ಈ ಕೆಳಗಿನಂತಿರುತ್ತದೆ. ಈಗ ಬಣ್ಣ ಕುರುಡುತನಕ್ಕೆ ಕಾರಣವಾದ ಜೀನನ್ನು ಛಿ ಎಂದು ಸಾಂಕೇತಿಕವಾಗಿ ಕರೆಯುವ. ಅಂತೆಯೇ ಸಹಜದೃಷ್ಟಿಗೆ ಆಧಾರವಾದ ಜೀನನ್ನು ಅ ಎಂದು ಇಟ್ಟುಕೊಳ್ಳೋಣ. ಈ ಜೀನ್‍ಗಳು ನಮಗೆಲ್ಲ ತಿಳಿದಿರುವಂತೆ ಘಿ ವರ್ಣತಂತುವಿನಿಂದ ಒಯ್ಯಲ್ಪಡುತ್ತವೆ. 

ಚಿತ್ರ-4

 ಈ ದಂಪತಿಗಳ ಮಕ್ಕಳು, ಮೊಮ್ಮಕ್ಕಳುಗಳಲ್ಲಿ ಈ ಬಣ್ಣ ಕುರುಡುತನಕ್ಕೆ ಕಾರಣವಾದ ಜೀನ್ ವಿತರಣೆ ಹೇಗಾಗುತ್ತದೆ ಎಂಬುದನ್ನು ಚಿತ್ರ 4ರಲ್ಲಿ ತೋರಿಸಿದೆ. ಇದರಿಂದ ನಮಗೆ ಮೊಮ್ಮಕ್ಕಳಲ್ಲಿ ಸಹಜಸ್ಥಿತಿಯ ಮತ್ತು ಬಣ್ಣ ಕುರುಡುತನವಿರುವ ಮೊಮ್ಮಕ್ಕಳುಗಳ ಪ್ರಮಾಣ 3 : 1 ಆಗಿದೆ ಎಂಬುದು ತಿಳಿದುಬರುತ್ತದೆ. ಆದರೆ ಈ ಪ್ರಮಾಣ ಲಿಂಗ ಸಂಬಂಧವಾದದ್ದು. ಏಕೆಂದರೆ ಅರ್ಧಭಾಗದಷ್ಟು ಗಂಡುಮಕ್ಕಳು ಮಾತ್ರ ಈ ಪಿಡುಗಿಗೆ ತುತ್ತಾಗಿದ್ದು ಹೆಣ್ಣುಮಕ್ಕಳಲ್ಲಿ ಈ ಜೀನಿನ ಬಾಹ್ಯಪ್ರಭಾವ ಕಂಡುಬರುವುದಿಲ್ಲ.

ಹಿಂದೆ ತಿಳಿದಿದ್ದಂತೆ ಙ ವರ್ಣತಂತುವಿನಲ್ಲಿ ಜೀನ್‍ಗಳು ಇಲ್ಲದೆ ಇಲ್ಲ. ಸಸ್ತನಿಗಳ ಙ ವರ್ಣತಂತುವಿನ ಕೆಲವು ಜೀನ್‍ಗಳು ಬರಿ ಗಂಡುಸಂತತಿಗೆ ಮೀಸಲಾಗಿದ್ದು ಹೆಣ್ಣು ಸಂತತಿಗೆ ಒಯ್ಯಲ್ಪಡುವುದಿಲ್ಲ. ಙ ವರ್ಣತಂತುವಿನಲ್ಲಿ ಕೇವಲ ಕೆಲವೇ ಲಿಂಗಸಂಬಂಧ ಜೀನ್‍ಗಳ ಇರುವಿಕೆಯನ್ನು ಗಮನಿಸಲಾಗಿದೆ. ಇಲ್ಲಿಯವರೆಗೂ ತಿಳಿದಿರುವಂತೆ, ಮಾನವನಲ್ಲಿ ಕಿವಿಯಮೇಲೆ ಬೆಳೆಯುವ ಕೂದಲುಗಳು, ಜಾಲಾಂಗುಲಿಗಳು (ವೆಬ್ಡ್ ಟೋಸ್) ಇವಕ್ಕೆ ಕೆಲವು ಉದಾಹರಣೆಗಳಾಗಿವೆ.
ಅನುವಂಶೀಯ ಮಾರುಟ್ಟುವೆಗಳು (ಮ್ಯುಟೇಷನ್ಸ್) : ಜೀನ್‍ಗಳು ಸಾಮಾನ್ಯವಾಗಿ ಸ್ಥಿರ ಅಥವಾ ದೃಢ ಸ್ವಭಾವವುಳ್ಳವಾಗಿರುತ್ತವೆ. ಆದರೆ ಒಮ್ಮೊಮ್ಮೆ ಜೀನ್‍ಗಳಲ್ಲೂ ಬದಲಾವಣೆಗಳಾಗಿರುತ್ತದೆ. ಇಂಥ ಬದಲಾವಣೆಗಳ ಹೆಸರು ಮಾರುಟ್ಟುವೆಗಳು. ಇವುಗಳಿಂದ ಉಂಟಾದ ಹೊಸ ಪ್ರತಿರೂಪಿ ಮೂಲ ಜೀನಿನಂತೆಯೇ ಪುನರುತ್ಪತ್ತಿ ಹೊಂದುತ್ತದೆ. ಪೂರ್ವಸ್ಥಿತಿಗೆ ತರುವ ಮಾರುಟ್ಟುವ (ರಿವರ್ಸ್ ಮ್ಯುಟೇಷನ್) ಮಾರುಟ್ಟಿದ ಜೀನನ್ನು ಸಹಜಸ್ಥಿತಿಗೆ ತರುತ್ತದೆ. ದ್ವಿಗುಣಿತ ಜೀವಿಗಳಲ್ಲಿ ಸಾಮಾನ್ಯವಾಗಿ ಮಾರುಟ್ಟುವೆಗಳು ಪ್ರತಿಕೋಶದ ವರ್ಣತಂತುಗಳ ಸಮಸ್ಥಿತಿಯ ಸ್ಥಳಗಳಲ್ಲಿ (ಹೊಮೊಲೊಗಸ್ ಲೋಸೈ) ಒಂದು ಅಥವಾ ಎರಡು ಜೀನ್‍ಗಳಲ್ಲಾಗಬಹುದು. ಇದರಿಂದ ಮಾರುಟ್ಟುವೆಗಳಿಗೆ ಅತಿಸೂಕ್ಷ್ಮ ಕಾರಣಗಳಿರುವುದೂ ಆ ಮಾರುಟ್ಟುವೆಗಳು ಜೀನಿಗೆ ಸೀಮಿತವಾಗಿರುವುದೂ ವ್ಯಕ್ತವಾಗುತ್ತವೆ. ಪ್ರಕೃತಿಯಲ್ಲಿ ಒಂದು ಗೊತ್ತಾದ ಪ್ರಮಾಣದಲ್ಲಿ ಆಗುವ ಈ ಮಾರುಟ್ಟುವೆಗಳ ವ್ಯಾಪ್ತಿಯನ್ನು ರಾಸಾಯನಿಕ ದ್ರವ್ಯಗಳು, ವಿದ್ಯುದ್ವಾಹಿ ಕಣಗಳಾಗಿ ಪರಿವರ್ತಿಸುವ ವಿಕಿರಣ ವಸ್ತುಗಳು ಮುಂತಾದ ಮಾರುಟ್ಟುವೆ ಜನಕವಸ್ತುಗಳ ಸಹಾಯದಿಂದ ಹೆಚ್ಚಸಬಹುದು. ಒಂದು ಜೀನ್‍ಗೆ ಎಷ್ಟು ಮಾರುಟ್ಟುವ ಜಾಗಗಳುಂಟೆಂಬುದು ಹೊತ್ತಲ್ಲದಿದ್ದರೂ ಬ್ಯಾಕ್ಟಿರಿಯೊಫೆಜ್ ಒಂದರಲ್ಲಿ ಇವು 300ಕ್ಕೂ ಹೆಚ್ಚು ಇರುವುದು ಕಂಡುಬಂದಿದೆ. ಹೆಚ್ಚು ಸಂತತಿಯನ್ನು ಪರಿಶೀಲಿಸಿದಂತೆಲ್ಲ ಒಂದು ಅಪೂರ್ವ ಅಡ್ಡಹಾಯುವಿಕೆಯನ್ನು ಕಂಡುಹಿಡಿಯುವ ಸಂಭವವೇ ಹೆಚ್ಚು. ಆದ್ದರಿಂದಲೇ ಒಂದು ಸ್ಥಳದ ಅನೇಕ ಮಾರುಟ್ಟುವ ಜಾಗಗಳು ಸೂಕ್ಷ್ಮಾಣು ಜೀವಿಗಳ ಗುಂಪುಗಳಲ್ಲಿ ಕಂಡುಬಂದಿರುವುದು. ಒಂದು ಜೀನ್‍ನ ಬೇರೆ ಬೇರೆ ಜಾಗಗಳಲ್ಲಾದ ಮಾರುಟ್ಟುವೆಗಳ ಒಂದೇ ಜೀವರಾಸಾಯನಿಕಕ್ರಿಯೆಯ ವಿವಿಧ ಹಂತಗಳ ಮೇಲೆ ತಮ್ಮ ಪ್ರಭಾವಬೀರುವುದು ಕಂಡುಬಂದಿದೆ. 
ಆಂಗ್ಲಭಾಷೆಯ ಮ್ಯುಟೇಷನ್ (ಮಾರುಟ್ಟುವೆ) ಎಂಬ ಪದವನ್ನು ಬದಲಾವಣೆ ಕ್ರಿಯೆಗೆ ಮಾತ್ರ ಮೀಸಲಾಗಿಡಬೇಕಾಗಿದೆ. ಈ ಕ್ರಿಯೆಯಿಂದ ಉತ್ಪತ್ತಿಯಾದ ಹೊಸ ಜೀನನ್ನು ಮಾರುಟ್ಟಿದ ಜೀನ್ (ಮ್ಯೂಟೆಂಟ್ ಜೀನ್) ಎಂದು ಕರೆಯುತ್ತಾರೆ. ಈ ಮಾರುಟ್ಟಿದ ಜೀನ್‍ನಿಂದ ಮಾರುಟ್ಟುವೆ ಲಕ್ಷಣಗಳು (ಮ್ಯೂಟೆಂಟ್ ಕ್ಯಾರೆಕ್ಟರ್ಸ್) ಬೆಳಕಿಗೆ ಬರುತ್ತವೆ. ಮಾರುಟ್ಟುವೆಗಳು ದೈಹಿಕ ಜೀವಕೋಶಗಳಲ್ಲೂ ಆಗಬಹುದು. ಅಂತೆಯೇ ಅವು ಪ್ರಜನನ ಅಂಗಾಂಶಗಳಲ್ಲೂ ಆಗಬಹುದು. ದೈಹಿಕ ಮಾರುಟ್ಟುವೆಗಳು ದೇಹದಲ್ಲಿ ಮಚ್ಚೆಗಳನ್ನು ಉತ್ಪತ್ತಿಮಾಡಬಹುದು. ಕೆಲಮೊಮ್ಮೆ ಸಸ್ಯಗಳ ಕೆಲವು ಅಸಾಧಾರಣ ರೀತಿಯ ಎಲೆಗಳು, ಹೂಗಳು, ಹಣ್ಣುಗಳು ಅಥವಾ ಅವುಗಳ ಕೆಲಭಾಗಗಳು ದೈಹಿಕ ಮಾರುಟ್ಟುವೆಗಳಿಂದ ಉಂಟಾಗಿರುತ್ತವೆ. ಜೀನ್‍ನ ಮಾರುಟ್ಟುವೆಗಳು ಯಾವ ದಿಕ್ಕಿನಲ್ಲಾದರೂ ಆಗಬಹುದು; ಕೆಲವೊಮ್ಮೆ ಅವು ಸಹಜಸ್ಥಿತಿಯಿಂದ ಮಾರುಟ್ಟಿದಸ್ಥಿತಿಯ ಕಡೆಗಿದ್ದರೆ ಮತ್ತೊಮ್ಮೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಆಗಬಹುದು. ಅನುವಂಶೀಯತೆಯ ಮೂಲಘಟಕಗಳಲ್ಲಿ ಏನೇ ಬದಲಾವಣೆಗಳಾಗಲಿ ಅವು ಮಾರುಟ್ಟುವೆಗಳ ಉದ್ಭವಕ್ಕೆ ಕಾರಣವಾಗುತ್ತವೆ.

ವರ್ಣತಂತುಗಳಲ್ಲಾದ ಮಾರುಟ್ಟವೆಗಳನ್ನು ನಾವು 3 ಗುಂಪುಗಳಾಗಿ ವಿಂಗಡಿಸಬಹುದು:
1 ಒಡೆಯುವಿಕೆಗೆ ಅಥವಾ ಒಂದು ಗೊತ್ತಾದ ವರ್ಣತಂತುವಿನಲ್ಲಾಗುವ ಪುನರ್ರಚನೆ. 2 ಒಂದು ವರ್ಣತಂತುವಿನ ಕೊಡುವಿಕೆ ಅಥವಾ ಕಳೆದುಕೊಳ್ಳುವಿಕೆ; 3 ಇಡೀ ವರ್ಣತಂತುಗಳ ಜೊತೆಗಳೇ ಗುಣಿತವಾಗುವಿಕೆ. 
ವರ್ಣತಂತುವಿನ ಮಾರುಟ್ಟುವೆಗಳಿಗೆ ಕೋಶವಿಭಜನೆಯಲ್ಲುಂಟಾಗುವ ಕೆಲವು ವಿಫಲತೆಗಳೇ ಕಾರಣವಾದರೂ ಜೀನ್ ಮಾರುಟ್ಟುವೆಗಳಿಗೆ ದೊಡ್ಡ ಗಾತ್ರದ ಪರಮಾಣುಗಳ ಅವಶ್ಯ ಅಸ್ಥಿರತೆಯೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಅನುವಂಶೀಯ ಮಾರುಟ್ಟುವೆಗಳು ಮತ್ತು ಜೀವವಿಕಾಸ: ಪ್ರಪಂಚದ ಎಲ್ಲ ಜೀವಿಗಳೂ ಪರಿಸರಕ್ಕೆ ಹೊಂದಿಕೊಂಡಿವೆ. ಮಾರುಟ್ಟುವೆಗಳು ಅನವಂಶೀಯ ವಸ್ತುವಿನಲ್ಲುಂಟಾಗುವ ರಾಸಾಯನಿಕ ಬದಲಾವಣೆಗಳಾದ್ದರಿಂದ ಅವುಗಳ ಪರಿಣಾಮಗಳು ಶರೀರದ ಆವಶ್ಯಕತೆಗಳಿಗೆ ಹೊಂದಿಕೊಡಿರಬೇಕೆಂದೇನೂ ಇಲ್ಲ.  ಬಹಳ ಸುವ್ಯವಸ್ಥಿತ ರಚನೆಗಳಲ್ಲಿ ಆಗಿಂದಾಗ್ಗೆ ಆಗುವ ಬದಲಾವಣೆಗಳು ಅವುಗಳ ಕ್ರಿಯಾಸಾಮಥ್ರ್ಯವನ್ನು ಹೆಚ್ಚಿಸುವುದಕ್ಕಿಂತ ಅವುಗಳಿಗೆ ಅಪಾಯ ತರುವ ಸಂಭವವೇ ಹೆಚ್ಚು. ಆದ್ದರಿಂದ ಮಿತಿಮೀರಿದ ಸಂಖ್ಯೆಯ ಮಾರುಟ್ಟುವೆಗಳೆಲ್ಲ ಜೀವಿಗೆ ತೊಂದರೆ ತಂದು ಆ ಜೀವಿಯ ವಿಕಾಸದ ಹಾದಿಯಲ್ಲಿ ಮುಂದುವರಿಯದಂತೆಯೇ ಮಾಡಿವೆ. ಜೀವಿಗೆ ಒಳ್ಳೆಯದಾಗುವ ಮಾರುಟ್ಟುವೆಗಳ ಪ್ರವಾಹದಿಂದಲೂ ಜೀವವಿಕಾಸ ಮುಂದುವರಿಯಲಾರದು. ಇದಕ್ಕೆ ವಿರುದ್ಧವಾಗಿಯೇ ವಿಕಾಸ ಹೆಚ್ಚಾಗಿ ಅನನುಕೂಲ, ಅನುಪಯುಕ್ತ ಮಾರುಟ್ಟುವೆಗಳ ಹಾದಿಯಲ್ಲಿ ಮುಂದುವರಿಯಬೇಕಾಯಿತು. ಇದು ಎರಡು ಮಾರ್ಗಗಳಿಂದ ಸಾಧಿಸಲ್ಪಟ್ಟಿದೆ. ಪ್ರಥಮವಾಗಿ, ಅನಿರೀಕ್ಷಿತವಾಗಿ ರೂಪಿಸುವ ಮಾರುಟ್ಟುವೆಗಳಿಂದಲೂ ಎರಡನೆಯದಾಗಿ, ಅಂಥ ವಿಭೇಧಗಳನ್ನು ಪಡೆದ ಜೀವಿಗಳ ಪ್ರತ್ಯೇಕೀಕರಣ ಮತ್ತು ಅದರ ಮೇಲೆ ಜರುಗುವ ನೈಸರ್ಗಿಕ ಆಯ್ಕೆಯಿಂದಲೂ ಜೀವ ವಿಕಾಸವಾಗುತ್ತ ಬಂದಿದೆ.

ಈ ಆವಶ್ಯಕತೆಗಳನ್ನು ಕೇವಲ ಕಣೀಯ ಅನುವಂಶೀಯತೆ ಮಾತ್ರ ಪೂರೈಸಬಲ್ಲುದು. ಅನುವಂಶೀಯತೆ ಸಮ್ಮಿಳಿತವಾಗುವ ತರಹದ್ದಾಗಿದ್ದರೆ ಅನುವಂಶೀಯ ಬದಲಾವಣೆಗಳೆಲ್ಲ ಜಾಗ್ರತೆಯಾಗಿ ನಶಿಸಿಹೋಗುತ್ತಿದ್ದುವು. ಹಾಗೇನಾದರೂ ಇದ್ದಿದ್ದರೆ ಪ್ರಕೃತಿಯಲ್ಲಿ ಜೀವಿಗಳು ಅನುವಂಶೀಯ ಬದಲಾವಣೆಗಳನ್ನು ಹೊಂದದಂತೆಯೇ ಅಥವಾ ಹೆಚ್ಚು ಅನುವಂಶೀಯ ಬದಲಾವಣೆಗಳಿದ್ದರೆ ಅವುಗಳನ್ನು ಕಾಪಾಡಿಕೊಳ್ಳಲು ಮತ್ತು ಸಮ್ಮಿಳಿತ ಪರಿಣಾಮಗಳನ್ನು ಎದುರಿಸಲು ಹೆಚ್ಚಿನ ಪರಿಮಾಣದ ಮಾರುಟ್ಟುವೆ ವ್ಯಾಪ್ತಿ ಇರಬೇಕಾಗುತ್ತಿತ್ತು. ತಂದೆತಾಯಿಗಳಿಬ್ಬರಿಂದಲೂ ಮಕ್ಕಳ ಅನುವಂಶೀಯ ಸಮಭಾಗ ಬರುವುದರಿಂದ ಅರ್ಧಭಾಗದಷ್ಟು ಜೀನ್‍ಗಳು ಪ್ರತಿಪೀಳಿಗೆಯಲ್ಲೂ ಮಾರುಟ್ಟುವೆಗೊಳ್ಳುತ್ತವೆ ಎಂದು ಇದರರ್ಥವಾಗುತ್ತದೆ. ಇದು ಪ್ರಯೋಗಗಳಿಂದ ಕಂಡುಹಿಡಿದಿರುವ ಸಾಮಾನ್ಯಸ್ಥಿತಿಯ ಸರಾಸರಿ ಮಾರುಟ್ಟುವೆಯ ವ್ಯಾಪ್ತಿಗಿಂತ ನೂರು ಅಥವಾ ಸಾವಿರಪಾಲು ಹೆಚ್ಚಾಗಬೇಕಾಗುತ್ತದೆ. ಆರ್. ಎ. ಫಿಷರ್ ಹೇಳಿರುವಂತೆ, ಈ ತರಹದ ಮಾರುಟ್ಟುವೆ ವ್ಯಾಪ್ತಿಗಳು ಇಲ್ಲದಿರುವುದಕ್ಕೆ ಪೂರ್ಣ ಆಧಾರಗಳಿವೆ. ಏಕೆಂದರೆ, ಅವೇನಾದರೂ ಇದ್ದಿದ್ದರೆ, ಜೀವಿಗಳಿಗೆ ಶುದ್ಧಸಂತತಿಯ ಸ್ಥಿತಿಯನ್ನು ತಲುಪುವುದು ಅಸಾಧ್ಯವಾಗುತ್ತಿತ್ತು. ಮಾರುಟ್ಟುವೆಗಳ ಹೆಚ್ಚಿನ ವ್ಯಾಪ್ತಿ ಹೆಚ್ಚಾಗಿ ಮಿಶ್ರಜೋಡಿಗಳೇ ಹೆಚ್ಚಾಗುವಂತೆ ಮಾಡುತ್ತದೆ.

ನಮಗೆ ಗೊತ್ತಿರುವಂತೆ ಈ ಮಾರುಟ್ಟುವೆಗಳು ಅಪೂರ್ವವಾಗಿ ಕಂಡು ಬರುವುದು ಕಣೀಯ ಅನುವಂಶೀಯತೆಗೆ ಅವಿರೋಧ ವಿಷಯವಾಗಿದೆ. ಇದಕ್ಕಿಂತ ಹೆಚ್ಚಾಗಿ ಇದು ಮಾರುಟ್ಟುವೆಗಳ ಸ್ಥಿತಿಗತಿಗಳ ನಿಯಂತ್ರಣ ಮಾಡುವ ಬಗ್ಗೆ ಊಹಿಸಲ್ಪಟ್ಟಿರುವ ಅನುವಂಶೀಯವಾದಗಳ ಮೇಲೆಲ್ಲ ತೀರ ಅನುಮಾನ ಬೀರುತ್ತದೆ. ಡಾರ್ವಿನ್ನನಿಗೆ ಅತಿಕ್ಲಿಷ್ಟವಾಗಿದ್ದ ಅಂಶಕ್ಕೆ ಉತ್ತರ ಇಂದು ಸಿದ್ಧವಾಗಿದೆ. ತನ್ನ ವಾದದ ಕೆಲವು ಅಂಶಗಳು ಸರಿಯಿರಲಾರವೆಂದು ಅವನು ತಿಳಿದಿದ್ದರೂ ಜೀವವಿಕಾಸ ದೀರ್ಘಕಾಲಾವಧಿಯಲ್ಲಿ ಕೆಲವು ಸೂಕ್ಷ್ಮ ಪ್ರಯೋಜನಕಾರಿ ಬದಲಾವಣೆಗಳ ಆಯ್ಕೆಯಿಂದುಂಟಾಗುತ್ತದೆ ಎಂದು ಭಾವಿಸಿದ್ದ. ಸಮ್ಮಿಳಿತ ಅನುವಂಶೀಯತೆಯ ಮುಖ್ಯತತ್ತ್ವಗಳನ್ನು ಒಪ್ಪಿಕೊಂಡ ಡಾರ್ವಿನ್ ಅಂದು ಒಂದು ದೊಡ್ಡ ಇಕ್ಕಟ್ಟಿನಲ್ಲಿ ಸಿಕ್ಕಿದ್ದ. ಈ ಇಕ್ಕಟ್ಟಿನಿಂದ ಪಾರಾಗಲು ಮೆಂಡಲ್ಲನ ತತ್ತ್ವಗಳ ಪುನಃಪರಿಶೀಲನೆಯಿಂದ ಸಾಧ್ಯವಾಯಿತು

ಅನುವಂಶೀಯತೆ ನ್ಯೂಕ್ಲಿಯಸ್‍ನ ಒಳಗಿರುವ ಜೀನ್‍ಗಳಿಗೆ ಮೀಸಲಾದ ಕ್ರಿಯೆ ಒಂದೇ ಅಲ್ಲ. ಇದನ್ನು ನ್ಯೂಕ್ಲಿಯಸ್‍ನ ಹೊರಗಿರುವ ಜೀವದ್ರವ್ಯದಲ್ಲಿರುವ ಜೀನ್‍ಗಳು ಕೂಡ ನಿರ್ವಹಿಸುತ್ತವೆ. ಇದನ್ನು ಸೈಟೋಜೀನ್, ಸೈಟೋ ಪ್ಲಾಸ್ಟಿಕ್ ಜೀನ್, ಪ್ಲಾಸ್ಮಜೀನ್ ಮುಂತಾದ ಹೆಸರುಗಳಿಂದ ಕರೆದಿದ್ದಾರೆ. ಡ್ರಾಸೊಫಿಲ ನೊಣದ ಇಂಗಾಲದ ಡೈ ಆಕ್ಸೈಡಿನ ನಿರೋಧಕ್ಕೆ ಕಾರಣವಾದ ಜೀನ್, ಯೀಸ್ಟಿನಲ್ಲಿ ಪುಟ್ಟ ಸಮುದಾಯವಾಗುವುದಕ್ಕೆ ಕಾರಣವಾದ ಜೀನ್, ಮುಸುಕಿನ ಜೋಳದಲ್ಲಿ ಗಂಡು ಹೂವಿನ ಬಂಜೆತನಕ್ಕೆ ಮೂಲವಾದ ಜೀನ್ ಹಾಗೂ ನ್ಯೂರೋಸ್ಪೊರ ಬೂಷ್ಟಿನಲ್ಲಿ ಇರುಕು ಲಕ್ಷಣಕ್ಕೆ ಕಾರಣವಾದ ಜೀನ್-ಇವೆಲ್ಲ ಸೈಟೊಪ್ಲಾಸಂನಲ್ಲಿದ್ದು ಅನುವಂಶೀಯತೆಯನ್ನು ನಿರ್ದೇಶಿಸುವ ಜೀನ್‍ಗಳಿಗೆ ಉದಾಹರಣೆಗಳು. ಈ ಸಂದರ್ಭಗಳಲ್ಲಿ ಜೀವದ್ರವ್ಯದಲ್ಲಿ ಇರುವ, ಅದರಲ್ಲಿಯೂ ಮಾತೃವಿನಿಂದ ಅಂಡದ ಮೂಲಕ ಬರುವ ಜೀನ್‍ಗಳು ಅನುವಂಶೀಯ ಮಾದರಿಗಳನ್ನು ನಿರ್ಧರಿಸುತ್ತವೆ.
 (ಎಂ.ಆರ್.ಆರ್.ಎಸ್.)

ಮನಶ್ಯಾಸ್ತ್ರ ಮತ್ತು ಅನುವಂಶೀಯತೆ: ವಂಶಾನುಗತ ಗುಣಲಕ್ಷಣಗಳನ್ನು ಕುರಿತು ಹಲವಾರು ಪ್ರಾಯೋಗಿಕ ಪರೀಕ್ಷೆಗಳನ್ನು ಅನೇಕ ವಿಜ್ಞಾನಿಗಳು ನಡೆಸಿದ್ದಾರೆ. ಜೀವಿಗಳ ವಿಕಸನ ಕ್ರಮದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಸಂತತಿಯಿಂದ ಸಂತತಿಗೆ ಹರಿಯುವಾಗ ಅನುವಂಶೀಯ ಗುಣಲಕ್ಷಣಗಳು ಬದಲಾವಣೆ ಹೊಂದಬಹುದು. ಅವುಗಳ ಪ್ರಯೋಗದಲ್ಲಾಗಲಿ, ಪ್ರತ್ಯೇಕವಾಗಿಯೇ ಆಗಲಿ, ಒಂದು ಸಂತತಿಯಲ್ಲಿ ಕಂಡುಬಂದ ಗುಣಲಕ್ಷಣಗಳು ಮುಂದಿನ ಸಂತತಿಯಲ್ಲಿ ವ್ಯತ್ಯಾಸ ಹೊಂದಿರುತ್ತವೆ. ಇದು 1800ರಲ್ಲಿ ಲಮಾರ್ಕ್ ಎಂಬುವನು ಮಂಡಿಸಿದ ವಿಚಾರಸರಣಿ. ಒಂದಾನೊಂದು ಕಾಲದಲ್ಲಿ ಜಿರಾಫೆಯಂಥ ಪ್ರಾಣಿಗೆ ಕತ್ತು ಮೊಟಕಾಗಿತ್ತು ಎಂಬುದು ಲಮಾರ್ಕನ ಭಾವನೆ. ಜಿರಾಫೆ ಗಿಡದ ಎಲೆಗಳನ್ನು ತಿನ್ನುತ್ತಿದ್ದು ಎತ್ತರದ ಕೊಂಬೆಗಳಲ್ಲಿರುವ ಎಲೆಗಳನ್ನು ತಿನ್ನಲು ತನ್ನ ಕತ್ತನ್ನು ಚಾಚುತ್ತಿತ್ತು. ಇದರ ಪರಿಣಾಮವಾಗಿ ಜಿರಾಫೆಯ ಕತ್ತು ಉದ್ದವಾಗುತ್ತ ಹೋಯಿತು. ಉದ್ದದಲ್ಲಾದ ಈ ಹೆಚ್ಚಳ ಅದರ ಮರಿಗಳಿಗೂ ಬಂದಿತು. ಹೀಗೆ ವಂಶಗಳು ಕಳೆದಂತೆ ಕತ್ತು ಉದ್ದವಾಗುತ್ತ ಹೋಗಿ ಎತ್ತರದ ಕೊಂಬೆಗಳೂ ಅದರ ಬಾಯಿಗೆ ನಿಲುಕುವಂತಾಗಿ ಕತ್ತನ್ನು ಚಾಚುವ ಆವಶ್ಯಕತೆಯೇ ಇಲ್ಲದಂತಾಯಿತು. ಇದನ್ನು ಅಭ್ಯಾಸದಿಂದ ಬಂದ ಅನುವಂಶೀಯ ಲಕ್ಷಣ ಎಂದು ಹೇಳುತ್ತಾರೆ. ಲಮಾರ್ಕನ ಅಭಿಪ್ರಾಯದಲ್ಲಿ ಇಲ್ಲೆ ಸುತ್ತಣ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕಾಗಿ ಸಂತತ ಪ್ರಯತ್ನ ಆವಶ್ಯವಾಗುತ್ತದೆಯೋ ಅಲ್ಲಿ ಶಾಶ್ವತ ದೈಹಿಕ ಬದಲಾವಣೆಗಳು ಆಗುತ್ತವೆ; ಅವೇ ಮುಂದೆ ಅನುವಂಶೀಯವಾಗುತ್ತವೆ. ಆದರೆ ಲಮಾರ್ಕನ ಈ ಭಾವನೆ ಇಂದು ಒಪ್ಪಿಗೆಯಾಗಿಲ್ಲ. ಮೆಂಡಲ್‍ವಾದವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಸಾಮಾನ್ಯವಾಗಿ ಪರಿಸರದಲ್ಲುಂಟಾಗುವ ಬದಲಾವಣೆಯಿಂದ ಕಣಬೀಜಗಳ ಮೇಲೆ ಯಾವ ರೀತಿಯ ಪರಿಣಾಮವೂ ಆಗುವುದಿಲ್ಲ. ಅಪೂರ್ವವಾಗಿ ಕಣಬೀಜದ ವ್ಯವಸ್ಥೆಯಲ್ಲಿ ಇದ್ದಕ್ಕಿದ್ದಂತೆ ಏರುಪೇರುಗಳು ತಲೆದೋರಿ ಹೊಸ ವೈಲಕ್ಷಣ್ಯಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಇಂಥ ಬದಲಾವಣೆಗಳು ಪರಿಸರದಿಂದ ಪ್ರಭಾವಿತರಾದ ಮಾತಾಪಿತೃಗಳ ಮಕ್ಕಳಲ್ಲಿ ವಂಶಾರ್ಜಿತವಾಗುತ್ತವೆ. ಈ ತತ್ತ್ವವನ್ನು ಡೆವ್ರೀಸ್ ಎಂಬುವ ಮಂಡಿಸಿ ಇದನ್ನು ಉತ್‍ಪರಿವರ್ತನೆಯ ತತ್ತ್ವವೆಂದು ಕರೆದ. ವಿಜ್ಞಾನಿಗಳು ಇದನ್ನು ವರ್ಣತಂತುಗಳ ಮತ್ತು ಜೀನ್‍ಗಳ ವ್ಯತ್ಯಾಸಗಳಿಂದಾಗಿ ಒದಗುವ ವಂಶಾರ್ಜಿತ ದೈಹಿಕ ಬದಲಾವಣೆಗಳು ಎಂದು ಭಾವಿಸುತ್ತಾರೆ. ಇಂಥ ವ್ಯತ್ಯಾಸ ಅಥವಾ ಉತ್‍ಪರಿವರ್ತನೆಯನ್ನು ಸಾಮಾನ್ಯವಾಗಿ 5ರಿಂದ 10 ಹುಳಗಳಲ್ಲೊಂದರಲ್ಲಿ ನೋಡಬಹುದೆಂಬುದು ಮಾರ್ಗನ್‍ನ ಅಭಿಪ್ರಾಯ.

ಕೂದಲಿನ ಮತ್ತು ಕಣ್ಣಿನ ಬಣ್ಣ, ದೇಹದಾಡ್ರ್ಯ ಮತ್ತು ರಕ್ತ ಜಾತಿಗಳಂಥ ದೈಹಿಕ ವೈಲಕ್ಷಣಗಳು ಮತ್ತು ಬುದ್ಧಿಶಕ್ತಿ, ಭಾವೋದ್ರೇಕತೆ ಅಥವಾ ಆಕ್ರಮಣ ಪ್ರವೃತ್ತಿಯಂಥ ವೈಲಕ್ಷಣಗಳು ವಿಕಾಸವಾದದ ತತ್ತ್ವವನ್ನನುಸರಿಸಿ ಸಂಭವಿಸುತ್ತವೆ. ವಿಜ್ಞಾನಿಗಳು ಆಯ್ಕೆ ರೀತಿಯ ಮರಿಮಾಡಿಸುವ ವಿಧಾನದ ಮೂಲಕ ಪ್ರಾಣಿಗಳ ಮೇಲೆ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ; ಮತ್ತು ಮರಿಹಾಕುವಿಕೆ ಅಥವಾ ಪ್ರಭೇಧಗಳಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಮಾನಸಿಕ ಲಕ್ಷಣಗಳು ಬದಲಾಯಿಸುವುದನ್ನು ಕಂಡುಹಿಡಿದಿದ್ದಾರೆ. ಟ್ರೆಯಾನ್ ಎಂಬುವನು ಆಯ್ಕೆ ವಿಧಾನದಲ್ಲಿ ಮರಿಮಾಡಿಸುವ ವಿಧಾನವನ್ನು ಬಳಸಿ ಇಲಿಗಳು ಕಲಿಯುವ ಕ್ರಿಯೆಯ ಬಗ್ಗೆ ಅನೇಕ ಅಂಶಗಳನ್ನು ಸಂಗ್ರಹಿಸಿದ. ಅವನು ಖಿ ಆಕಾರದ ವ್ಯೂಹದ ರಚನೆಯನ್ನು ಜಾಗ್ರತೆಯಾಗಿ ಅರ್ಥಮಾಡಿಕೊಳ್ಳುವ ಮತ್ತು ಇಂಥ ಸಾಮಥ್ರ್ಯವಿಲ್ಲದೇ ಇರುವ ಇಲಿಗಳ ಗುಂಪನ್ನು ಪ್ರತ್ಯೇಕಿಸಿದ. ಇಲಿಗಳನ್ನು ಈ ಗುಂಪುಗಳನ್ನಾಗಿ ವಿಭಾಗಿಸಬೇಕಾದರೆ ಇವುಗಳು ವ್ಯೂಹದ ರಚನೆಯನ್ನು ಅರ್ಥಮಾಡಿಕೊಳ್ಳದೇ ತಪ್ಪುಗಳನ್ನು ಮಾಡುತ್ತಿದ್ದುದನ್ನು ಆಧಾರವನ್ನಾಗಿ ಇಟ್ಟುಕೊಳ್ಳಬೇಕಾಯಿತು. ವ್ಯೂಹದ ರಚನೆಯನ್ನು ಕಲಿತುಕೊಳ್ಳುವುದರಲ್ಲಿ ಚುರುಕಾಗಿದ್ದ ಇಲಿಯನ್ನು ಇದೇ ರೀತಿಯಲ್ಲಿ ಚುರುಕಾಗಿದ್ದ ಅನ್ಯಲಿಂಗದ ಇಲಿಯೊಡನೆ ಒಟ್ಟುಗೂಡಿಸುವುದರಿಂದ ಮರಿ ಮಾಡಿಸುವ ಕ್ರಮವನ್ನು ಟ್ರೆಯಾನ್ ಅನುಸರಿಸಿದ. ಇದರಂತೆಯೇ ಈತನ ವ್ಯೂಹದ ರಚನೆಯನ್ನು ಕಲಿತುಕೊಳ್ಳುವುದರಲ್ಲಿ ಹಿಂದುಳಿದ ಇಲಿಗಳನ್ನು ಇದೇ ಗುಂಪಿನ ಅನ್ಯಲಿಂಗದ ಇಲಿಗಳೊಡನೆ ಒಟ್ಟುಗೂಡಿಸುವುದರಿಂದ ಇನ್ನೊಂದು ವಿಧವಾದ ಮರಿಗಳು ಹುಟ್ಟುವುದಕ್ಕೆ ಅವಕಾಶವನ್ನು ಮಾಡಿಕೊಟ್ಟ. ಇಲ್ಲಿ ಪರಿಸರನಿಯಂತ್ರಣವನ್ನು ಕಟ್ಟುನಿಟ್ಟಾಗಿ ಸಾಧಿಸಲಾಯಿತು. ಈ ಆಯ್ಕೆ ಕ್ರಮದಿಂದ ಮರಿಮಾಡಿಸುವ ವಿಧಾನ 18 ತಲೆಮಾರುಗಳವರೆಗೆ ಮುಂದುವರಿಯಿತು. ಟ್ರೆಯಾನ್ ವ್ಯೂಹಶಿಕ್ಷಣದ ಸಾಮಥ್ರ್ಯದ ಪ್ರಥಮಪರೀಕ್ಷೆ ಮತ್ತು ಎಂಟು ಅನುಕ್ರಮವಾದ ವಂಶಾವಳಿಯ ಪರೀಕ್ಷೆಗಳನ್ನು ನಡೆಸಿ ಇದರಿಂದ ಬಂದ ಫಲಿತಾಂಶಗಳನ್ನು ಪ್ರಕಟಿಸಿದ. ಇದರಿಂದ ಕಲಿಕೆಯಲ್ಲಿ ಚುರುಕು ಇಲಿಗಳಿಗೆ ಚುರುಕುಮರಿಗಳೂ ಹಿಂದುಳಿದಿದ್ದ ಇಲಿಗಳಿಗೆ ಹಿಂದುಳಿದ ಮರಿಗಳೂ ಹುಟ್ಟಿದುವು. ಇದನ್ನು ಪುನಃ ಇಲಿಗಳಲ್ಲಿ 8-18 ತಲೆಮಾರುಗಳವರೆಗೂ ಗಮನಿಸಲಾಯಿತು. ವ್ಯೂಹಶಿಕ್ಷಣದ ಸಶಮಥ್ರ್ಯ ವಂಶಾರ್ಜಿತವೆನ್ನುವುದನ್ನು ಈ ಪ್ರಯೋಗ ತಿಳಿಸುತ್ತದೆ. ಮತ್ತೊಬ್ಬ ಸಂಶೋಧಕ ಭಾವೋದ್ರೇಕತೆ ಅಧಿಕವಾಗಿರುವ ಒಂದು ವಂಶದ ಇಲಿಗಳನ್ನೂ ಮತ್ತು ಅಲ್ಪ ಭಾವೋದ್ರೇಕತೆಯುಳ್ಳ ಮತ್ತೊಂದು ವಂಶದ ಇಲಿಗಳನ್ನೂ ಉತ್ಪಾದಿಸುವುದರಲ್ಲಿ ಯಶಸ್ವಿಯಾದ. ಇನ್ನೂ ಕೆಲವು ಸಂಶೋಧಕರು ಪ್ರಾಣಿಗಳ ಕ್ರೂರತ್ವ ಹಾಗೂ ಸಾಧುಸ್ವಭಾವದಂಥ ಚಿತ್ತಪ್ರಕೃತಿಗಳ ಲಕ್ಷಣಗಳನ್ನು ವಿವಿಧ ವಂಶಗಳ ಅಧ್ಯಯನಗಳ ಮೂಲಕ ಕಂಡುಕೊಂಡಿದ್ದಾರೆ. ಕ್ರೂರ ಅಥವಾ ಸಾಧುಸ್ವಭಾವದ ಪ್ರಾಣಿಗಳು ಆಯಾ ಸ್ವಭಾವದ ಮರಿಗಳನ್ನು ಹಾಕುತ್ತವೆ ಎಂಬುದು ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ತಿಳಿದುಬಂದಿದೆ. ಒಂದು ಪ್ರಯೋಗವನ್ನು ನಡೆಸಿದಾಗ ನಾರ್ವೆ ಜಾತಿಯ ಬೂದುಬಣ್ಣದ ಕಾಡಿಲಿಗಳನ್ನು ಮತ್ತು ಪಳಗಿಸಿದ ಆಲ್ಬಿನೋ ಜಾತಿಯ ಇಲಿಗಳನ್ನು ಹಿಡಿದು ಅವುಗಳ ಮರಿಗಳನ್ನು ಒಂದು ಬೋನಿನಲ್ಲಿ ಬೆಳೆಸಲಾಯಿತು. ಇದಾದ ಅನಂತರ ನಾರ್ವೆ ಜಾತಿಯ ಬೂದು ಬಣ್ಣದ ಕಾಡಿಲಿಗಳ ಮರಿಗಳು ಕ್ರೂರವಾಗಿಯೂ ಪಳಗಿಸಿದ ಆಲ್ಬಿನೋ ಇಲಿಗಳ ಮರಿಗಳು ಸಾಧುವಾಗಿಯೂ ಇದ್ದುದು ಕಂಡುಬಂದಿತು. ಈ ವ್ಯತ್ಯಾಸ ತಳಿಶಾಸ್ತ್ರದ ತತ್ತ್ವವನ್ನನುಸರಿಸಿದೆ. ಜಿಸ್ಸ್‍ಬರ್ಗ್ ಮತ್ತು ಆಲಿ ಎಂಬುವರ ಅಧ್ಯಯನದಿಂದ ಪ್ರಾಣಿಗಳಲ್ಲಿ ಕಂಡುಬರುವ ಆಕ್ರಮಣದ ಪ್ರವೃತ್ತಿಗೆ ತಳಿಶಾಸ್ತ್ರದ ಆಧಾರವಿದೆಯೆಂದು ತಿಳಿದುಬಂದಿದೆ. ಇವರು ಮೂರು ವಂಶಗಳ ಸುಂಡಿಲಿಗಳ ಹೋರಾಡುವ ವರ್ತನೆಯನ್ನು ಪರಿಶೀಲಿಸಿದರು. ಇವರ ಸಂಶೋಧನೆ ಕಪ್ಪು, ಅಗೂಟೀ ಮತ್ತು ಆಲ್ಬಿನೋ ಜಾತಿಯ ಇಲಿಗಳ ಮೂರು ಬಗೆಗಳಲ್ಲಾಗಿತ್ತು. ಕಪ್ಪು ಇಲಿ ಹೋರಾಟದಲ್ಲಿ ಪ್ರಥಮ ಸ್ಥಾನವನ್ನೂ ಅಗೂಟೀ ಇಲಿ ದ್ವಿತೀಯ ಸ್ಥಾನವನ್ನೂ ಆಲ್ಬಿನೋ ಇಲಿ ಅಂತಿಮ ಸ್ಥಾನವನ್ನೂ ಗಳಿಸಿದುವು. ಹೋರಾಡುವ ಸಾಮಥ್ರ್ಯವನ್ನು ಬೆಳೆವಣಿಗೆ ಪ್ರಭಾವಿಸುವ ಸಾಧ್ಯತೆಯನ್ನು ತೆಗೆದುಹಾಕಲು, ಕಪ್ಪು ಮತ್ತು ಆಲ್ಬಿನೋ ಇಲಿಗಳ ಮರಿಗಳನ್ನು ಪೋಷಣೆಮಾಡುವ ತಾಯಿ ಇಲಿಯ ಜೊತೆ ಬೆಳೆಸಿ ಮತ್ತೆ ಕೆಲವು ಆಲ್ಬಿನೋ ಇಲಿಗಳನ್ನು ಪೋಷಣೆ ಮಾಡುವ ಕಪ್ಪು ಇಲಿಗಳ ಜೊತೆಯಲ್ಲಿ ಬೆಳೆಸಲಾಯಿತು. ಈ ರೀತಿಯಾಗಿ ಪೋಷಿತವಾದ ಮರಿಗಳನ್ನು ಪರೀಕ್ಷಿಸಲಾಗಿ, ಹೋರಾಡುವ ಸಾಮಥ್ರ್ಯದಲ್ಲಿ ಕಪ್ಪು ಇಲಿಗಳು ಆಲ್ಬಿನೋ ಇಲಿಗಳಿಗಿಂತ ಉತ್ತಮವೆಂದು ಕಂಡುಬಂದಿತು. ಇವುಗಳು ಬೆಳೆದ ಪರಿಸರದಿಂದ ಇವುಗಳ ವ್ಯಕ್ತಿತ್ತ್ವದ ರಚನೆಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.
ಪ್ರಾಣಿಗಳ ಅನುವಂಶೀಯತೆ ಮತ್ತು ಪರಿಸರದ ಪ್ರಭಾವಗಳಿಂದ ಬುದ್ಧಿಶಕ್ತಿಯಲ್ಲಾಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಅನೇಕ ಪ್ರಯೋಗಗಳನ್ನು ನಡೆಸಲಾಗಿದೆ. ಪರಿಸರ ವ್ಯಕ್ತಿತ್ವದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂಬ ನಂಬಿಕೆಯನ್ನಿಟ್ಟಿರುವ ಮನಶಾಸ್ತ್ರಜ್ಞರು ಅನುವಂಶೀಯತೆಯಿಂದ ವ್ಯಕ್ತಿಯ ಜೀವನದಲ್ಲಿ ಹೆಚ್ಚು ಬದಲಾವಣೆಗಳಾಗುವುದಿಲ್ಲವೆಂದು ಹೇಳುತ್ತಾರೆ. ಆರೋಗ್ಯವಾಗಿರುವ ಯಾವ ಮಗುವಿಗೇ ಸೂಕ್ತ ತರಬೇತಿ ಮತ್ತು ಆವರಣವನ್ನು ಒದಗಿಸುವುದರಿಂದ ಬುದ್ಧಿಶಕ್ತಿಯಲ್ಲಿ ಶ್ರೇಷ್ಠವೆನಿಸುವ ಹಾಗೆ ಮಾಡಬಹುದೆಂದು ಇವರು ವಾದಿಸುತ್ತಾರೆ. ಮತ್ತೊಂದು ಕಡೆ ಅನುವಂಶೀಯ ಶಾಸ್ತ್ರಜ್ಞರು ಬುದ್ಧಿಶಕ್ತಿ ಎನ್ನುವುದು ಕೇವಲ ಅನುವಂಶೀಯತೆಯ ಅಂಶದಿಂದಲೇ ನಿರ್ಧರಿತವಾಗುತ್ತದೆ ಎಂದು ವಾದಹೂಡುತ್ತಾರೆ. ಬುದ್ಧಿಶಕ್ತಿ ಅನುವಂಶೀಯತೆಯಿಂದ ಬಂದದ್ದೊ ಅಥವಾ ಪರಿಸರದಿಂದ ಬಂದದ್ದೊ ಅಥವಾ ಎರಡರಿಂದಲೂ ಬಂದದ್ದೊ ಎಂಬುದನ್ನು ನಾವು ಕಂಡುಹಿಡಿಯಬೇಕು. ಅನುವಂಶೀಯತೆಯ ಪರಿಣಾಮವಾಗಿರುವ ವ್ಯತ್ಯಾಸಗಳನ್ನು ತಿಳಿಯಲು, ನಾವು ಇದರಲ್ಲಿ ಭಿನ್ನವಾಗಿರುವ ಮಕ್ಕಳನ್ನು ಒಂದೇ ಪರಿಸರದಲ್ಲಿ ಬೆಳೆಸಬೇಕು. ಹಾಗೆಯೇ ಪರಿಸರದಿಂದಾಗುವ ಪರಿಣಾಮಗಳನ್ನು ತಿಳಿಯಲು ಒಂದೇ ಅನುವಂಶೀಯತೆಗೆ ಸೇರಿರುವ ವ್ಯಕ್ತಿಗಳನ್ನು ವಿವಿಧ ಪರಿಸರಗಳಿಗೆ ಒಳಪಡಿಸಬೇಕು. ಇಂಥ ಪ್ರಯತ್ನದಲ್ಲಿ ಅನನ್ಯ ಅವಳಿ ಮಕ್ಕಳನ್ನು (ಐಡೆಂಟಿಕಲ್ ಟ್ವಿನ್ಸ್) ಅವರ ಜೀವನದ ಮೊದಲಲ್ಲೆ ವಿಂಗಡಿಸಿ, ಅವರನ್ನು ವಿವಿಧ ಸಾಮಾಜಿಕ ಹಾಗೂ ಪ್ರಾಪಂಚಿಕ ಜೀವನದ ಸ್ಥಿತಿಗಳಲ್ಲಿ ಬೆಳೆಸಲಾಗುತ್ತದೆ. ಕೆಲವು ಕಾಲದ ಅನಂತರ ಅವರ ಬುದ್ದಿಶಕ್ತಿಗಳನ್ನು ಪರೀಕ್ಷಿಸಲಾಗುತ್ತದೆ. ಒಂದು ಪರೀಕ್ಷೆಯಲ್ಲಿ ಒಟ್ಟಿಗೆ ಬೆಳೆಸಿದ ಹಾಗೂ ಒಟ್ಟಿಗೆ ಬೆಳೆಸದ ಅನನ್ಯ ಅವಳಿ ಮಕ್ಕಳ ಬುದ್ಧಿಶಕ್ತಿಯನ್ನು ಪರೀಕ್ಷಿಸಲಾಯಿತು. ಒಟ್ಟಿಗೆ ಬೆಳೆಸಿದ ಅನನ್ಯ ಅವಳಿ ಮಕ್ಕಳು 0.85 ಅಂಶದಷ್ಟು ಪರಸ್ಪರ ಸಂಬಂಧವನ್ನು ಹೊಂದಿದ್ದುದೂ ಒಟ್ಟಿಗೆ ಬೆಳೆಸದ ಅನನ್ಯ ಅವಳಿ ಮಕ್ಕಳು 0.70 ಅಂಶದಷ್ಟು ಪರಸ್ಪರ ಸಂಬಂಧವನ್ನು ಹೊಂದಿದ್ದುದೂ ಕಂಡುಬಂದಿತು. ಒಟ್ಟಿಗೆ ಬೆಳೆಸಿದ ಅನನ್ಯ ಅವಳಿ ಮಕ್ಕಳಲ್ಲಿ ಹಾಗೂ ಬೇರೆ ಬೇರೆಯಾಗಿ ಬೆಳೆಸಿದ ಅನನ್ಯ ಅವಳಿ ಮಕ್ಕಳಲ್ಲಿ ಕಂಡುಬರುವ ವ್ಯತ್ಯಾಸವೂ ಅನುವಂಶೀಯತೆ ಮತ್ತು ಪರಿಸರದಿಂದ ಬುದ್ಧಿಶಕ್ತಿಯ ಬೆಳೆವಣಿಗೆಯ ಮೇಲಾಗುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ಅನನ್ಯ ಅವಳಿ ಮಕ್ಕಳಲ್ಲಿ ಕಂಡುಬರುವ ಸಾಮ್ಯ ಮತ್ತು ಬುದ್ಧಿಶಕ್ತಿಯ ಬೆಳೆವಣಿಗೆ ಜೀವನದುದ್ದಕ್ಕೂ ಇರುತ್ತವೆ. ಭ್ರಾತ್ರೀಯ ಅನನ್ಯ ಅವಳಿಗಳು ಹಾಗೂ ಏಕೋದರಗಳು ವಿವಿಧ ಅನುವಂಶೀಯತೆಯನ್ನು ಹೊಂದಿರುತ್ತವೆ. ಆದರೆ ಇವು ಒಂದೇ ಪರಿಸರದಲ್ಲಿ ಬೆಳೆಸಲ್ಪಡುತ್ತವೆ. ಇವುಗಳು ಕ್ರಮವಾಗಿ 0.64 ಮತ್ತು 0.50 ಅಂಶಗಳ ಪರಸ್ಪರ ಸಂಬಂಧಗಳನ್ನು ಹೊಂದಿರುತ್ತವೆ. ಒಂದೇ ರೀತಿಯ ಪರಿಸರವನ್ನು ಒದಗಿಸಿದ್ದರೂ ಅವು ತಮ್ಮ ಬುದ್ಧಿಶಕ್ತಿಯಲ್ಲಿ ವ್ಯಕ್ತಿಶಃ ವ್ಯತ್ಯಾಸಗಳನ್ನು ಹೆಚ್ಚಾಗಿ ತೋರಿಸುತ್ತವೆ. ಒಂದು ವಿಧವಾದ ಪರಿಸರವನ್ನು ಭ್ರಾತ್ರೀಯ ಅನನ್ಯ ಅವಳಿಗಳಿಗೂ ಮತ್ತು ಏಕೋದರಗಳಿಗೂ ಒದಗಿಸಿಕೊಟ್ಟರೂ ಇದರಿಂದ ಒಂದೇ ಸಮನಾದ ಬುದ್ಧಿಶಕ್ತಿಯ ಬೆಳೆವಣಿಗೆ ಕಂಡುಬರುವುದಿಲ್ಲ. ಪರಿಸರ ಅನುವಂಶೀಯತೆಯ ಕೇವಲ ಒಂದು ಸಹಸಂಬಂಧಿ. ಇದು ಯಾವ ಮತ್ತು ಎಷ್ಟು ಪ್ರಮಾಣದಲ್ಲಿ ಅನುವಂಶೀಯತೆಯ ಗುಣಲಕ್ಷಣಗಳನ್ನು ಅಭಿವೃದ್ಧಿಗೊಳಿಸಬಹುದು ಎಂಬುದನ್ನು ನಿರ್ಧರಿಸುತ್ತದೆ. ಅನುವಂಶೀಯತೆ ಎಂಬ ಪದದಲ್ಲಿ ಒಂದು ಶಾಶ್ವತವಾಗಿ ಕಂಡುಬರುವ ಅಂಶವೂ ಮತ್ತು ಪರಿಸರ ಎಂಬ ಪದದಲ್ಲಿ ಅಶಾಶ್ವತವಾದ ಅಂಶವೂ ಇವೆ ಎಂದು ಹೇಳಬಹುದು. ಒಬ್ಬ ವ್ಯಕ್ತಿಗಿರುವ ಪರಿಸರವನ್ನು ಉತ್ತಮಪಡಿಸುವುದರಿಂದ ಅನುವಂಶೀಯ ಶಕ್ತಿವೈಶಿಷ್ಟ್ಯಗಳು ಯಾವ ಸಂದೇಹವೂ ಇಲ್ಲದೆ ಅಭಿವೃದ್ದಿಗೊಳ್ಳುತ್ತವೆ. ಮನುಷ್ಯ ಅನುವಂಶೀಯತೆ ಹಾಗೂ ಪರಿಸರ-ಈ ಎರಡರಿಂದಲೂ ಬಂದ ವ್ಯಕ್ತಿ.								(ಎಚ್.ಡಿ.ವಿ.)

ಶಿಕ್ಷಣ ಮತ್ತು ಅನುವಂಶೀಯತೆ: ಒಬ್ಬ ವ್ಯಕ್ತಿಯ ಬೆಳೆವಣಿಗೆಯಲ್ಲಿ ಅನುವಂಶೀಯತೆ ಮತ್ತು ಪರಿಸರ ಇವೆರಡರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬ ವಿಷಯದಲ್ಲಿ ಎರಡು ವಿರುದ್ಧ ಪಂಥಗಳಿವೆ. ಮಗುವಿನ ಭವಿಷ್ಯಜೀವನವನ್ನು ಅನುವಂಶೀಯತೆಯೇ ನಿರ್ಧರಿಸುವುದು ಎಂಬುದನ್ನು ಗಾಲ್ಡನ್ ಮತ್ತು ಅವರ ಅನುಯಾಯಿಗಳು ಹೇಳಿದರೆ ವಾಟ್ಸನ್ ಮತ್ತು ಅವನ ಅನುಯಾಯಿಗಳು ಅನುವಂಶೀಯತೆ ಏನೇ ಇರಲಿ, ವ್ಯಕ್ತಿಯ ಶಿಕ್ಷಣಾಭಿವೃದ್ಧಿ ಅವನ ವ್ಯಕ್ತಿತ್ವ, ಭವಿಷ್ಯಜೀವನದ ಸ್ವರೂಪ-ಇವನ್ನೆಲ್ಲ ರೂಪಿಸುವುದು ಅವನು ವಾಸಿಸುವ ಪರಿಸರವೇ ಎನ್ನುತ್ತಾರೆ.

ಈ ವಾದಗಳನ್ನು ಸಿದ್ಧಪಡಿಸಲು ಅನೇಕ ವೈಜ್ಞಾನಿಕ ಸಂಶೋಧನೆಗಳನ್ನೂ ನಡೆಸಲಾಗಿದೆ.
1 ಮನೆತನಗಳ ಚರಿತ್ರೆಯ ಅಭ್ಯಾಸ: (i) ಗಾಲ್ಡನ್ ಅನೇಕ ಶ್ರೇಷ್ಠ ಮನೆತನಗಳ ಚರಿತ್ರೆಯನ್ನು ಪರಿಶೀಲಿಸಿ ಉತ್ತಮ ಮಾನಸಿಕಶಕ್ತಿಯ ಕಾರಣ ಅನುವಂಶೀಯತೆಯೆಂದು ನಿರ್ಧರಿಸಿದ್ದಾನೆ. (ii) ಗಾಲ್ಡನ್, ವೆಡ್ಜ್‍ವುಡ್, ಡಾರ್ವಿನ್ ಮನೆತನದ 1000 ವರ್ಷಗಳ ಚರಿತ್ರೆಯನ್ನು ಕಾರ್ಲಪಿಯರ್ಸನ್ ಶೋಧಿಸಿ ಆ ಮನೆತನದವರೆಲ್ಲರೂ ಪ್ರತಿಭಾಶಾಲಿಗಳಾಗಿ ಸಮಾಜದಲ್ಲಿ ಗಣ್ಯಸ್ಥಾನವನ್ನು ಗಳಿಸಿದ್ದುದೂ ಅಲ್ಲದೆ ಅವರಲ್ಲಿ ಐದು ನೇರವಾದ ತಲೆಮಾರಿನವರು ರಾಯಲ್ ಸೊಸೈಟಿಯ ಸದಸ್ಯತ್ವವನ್ನು ಸಂಪಾದಿಸಿರುವರೆಂದು ಹೇಳಿದ್ದಾನೆ. (iii) ಅಮೆರಿಕದ ಎಡ್ವಡ್ರ್ಸ್ ಮನೆತನದ ಸಂಶೋಧನೆ ನಡೆಸಿ ಡಾಕ್ಟರ್-ವಿನ್‍ಪಿಪ್ ಮೇಲಿನ ನಿರ್ಧಾರಕ್ಕೆ ಬಂದಿದ್ದಾನೆ. (iv) ಡಗ್‍ಡೇಲ್ ಎಂಬುವ ಮೇಕ್ಸ್‍ಜ್ಯೂಕ್ ಎಂಬ ಅಪರಾಧಿ ಮನೆತನದ ಚರಿತ್ರೆಯನ್ನೂ ಡಾಕ್ಟರ್ ಗೋಡಾರ್ಡ್ ಕಾಲಿಕಾಕ್ ಎಂಬ ಕ್ರಾಂತಿಕಾರಕ ಮನೆತನದ ಚರಿತ್ರೆಯನ್ನೂ ಪರಿಶೀಲಿಸಿ, ಆ ಮನೆತನಗಳಲ್ಲಿ ಹುಟ್ಟಿದವರಲ್ಲಿ ಅನೇಕ ಮಂದಿ ಮೂಲ ಪುರುಷನ ಅಧಮ (ಕೀಳು) ಮಾನಸಿಕ ಶಕ್ತಿಯನ್ನೇ ಹೊಂದಿದ್ದರು ಎಂದು ತಿಳಿಸಿದ್ದಾನೆ.
2. ಸಹಸಂಬಂಧದ ಅಭ್ಯಾಸ (ಕಾರಿಲೇಷನ್ ಸ್ಟಡೀಸ್): ಈ ಸಂಶೋಧನೆಗಳಿಂದ ವ್ಯಕ್ತವಾಗುವುದೇನೆಂದರೆ, ಸಹೋದರ ಸಹೊದರಿಯರಲ್ಲಿ ಅಂದರೆ ಏಕೋದರದಲ್ಲಿ (ಸಿಬ್ಲಿಂಗ್) ಕಂಡುಬರುವ ಮಾನಸಿಕಶಕ್ತಿಯ ಸಾದೃಶ್ಯಗಳಿಗಿಂತ ಅವಳಿ ಮಕ್ಕಳಲ್ಲಿ ಹೆಚ್ಚು ಸಾದೃಶ್ಯವಿರುವುದು. ರಕ್ತಸಂಬಂಧದ ಗಾಢತೆ ಹೆಚ್ಚಿದಂತೆಲ್ಲ ಬುದ್ಧಿಶಕ್ತಿಯಲ್ಲಿ ಹೆಚ್ಚಿನ ಸಾದೃಶ್ಯಕಂಡುಬರುವುದು. ಅಂದರೆ ಬುದ್ಧಿಶಕ್ತಿ ಅನುವಂಶೀಯವಾದುದು.

ಇವಲ್ಲದೆ, (ಈ ಹಿಂದಿನ ಲೇಖನದಲ್ಲಿ ಹೇಳಿರುವಂತೆ) ಬೇರೆ ಬೇರೆ ವರ್ಗದ ಮಕ್ಕಳನ್ನು ಹಲವಾರು ಪರಿಸರಗಳಲ್ಲಿ ಬೆಳೆಸಿ ಅವರ ವಿಕಾಸವನ್ನು ಅಭ್ಯಸಿಸಿದ್ದಾರೆ.

ಮೇಲಿನ ಸಂಶೋಧನೆಗಳಿಂದ ಸಂಗ್ರಹಿಸಿರುವ ರುಜುವಾತುಗಳಿಂದ ಅನುವಂಶೀಯತೆ ಮತ್ತು ಪರಿಸರಗಳು ಪರಸ್ಪರ ಪೋಷಕಗಳೆಂದು ವ್ಯಕ್ತವಾಗುವುದು. ಅನುವಂಶೀಯ ಗುಣಗಳು ಮಕ್ಕಳು ಪಡೆಯಬಹುದಾದ ಶಿಕ್ಷಣದ ಪರಮಾವಧಿಯನ್ನು ನಿರ್ಧರಿಸುತ್ತದೆ. ಆದರೆ ಅನುವಂಶೀಯ ಶಕ್ತಿಗಳು ಫಲಕಾರಿಯಾಗಿ ಬೆಳೆಯುವ ಮಟ್ಟವನ್ನು ಪರಿಸರ ನಿರ್ಧರಿಸುತ್ತದೆ. ಈ ದೃಷ್ಟಿಯಿಂದ ನೋಡಿದರೆ, ವ್ಯಕ್ತಿಯಲ್ಲಿ ಅಡಕವಾಗಿರುವ ಅನುವಂಶೀಯತೆಯ ಗುಣಗಳನ್ನು ಸಂಪೂರ್ಣವಾಗಿ ವಿಕಾಸಗೊಳಿಸಲು ಸಾಧಕವಾಗುವ ಪರಿಸರಗಳನ್ನು ಒದಗಿಸುವುದೇ ಶಿಕ್ಷಣದ ಮುಖ್ಯ ಗುರಿ. ಆದ್ದರಿಂದಲೇ ಶಿಕ್ಷಣದಲ್ಲಿ ಮುಂದುವರಿದ ದೇಶಗಳಲ್ಲಿ ಪರಿಸರಕ್ಕೆ ಹೆಚ್ಚು ಪ್ರಾಮುಖ್ಯ ದೊರೆತು ಅದನ್ನು ಸರ್ವವಿಧದಿಂದಲೂ ಉತ್ತಮಗೊಳಿಸಲು ಅನೇಕ ಪ್ರಯತ್ನಗಳು ನಡೆದಿವೆ. ಉಚಿತ ಒತ್ತಾಯದ ವಿದ್ಯಾಭ್ಯಾಸ, ಶಿಶುವಿಹಾರಗಳು, ಉಚಿತದೇಶೀಯ ಆರೋಗ್ಯ ಸೇವೆ, ಉಚಿತ ಸಾರ್ವಜನಿಕ ಪುಸ್ತಕ ಭಂಡಾರಗಳು, ವಾಚನಾಲಯಗಳು, ಮಧ್ಯಾಹ್ನದ ಊಟದ ವಿತರಣೆ, ಸಾರ್ವಜನಿಕ ಆಟದಮೈದಾನಗಳು, ಸಾಮಾಜಿಕ ಚಟುವಟಿಕೆಗಳು, ಉಚಿತ ಕಲಾಪ್ರದರ್ಶನಗಳು, ಪ್ರವಾಸ ಸೌಲಭ್ಯಗಳು, ರೇಡಿಯೊ, ಚಲನಚಿತ್ರಗಳು, ಟೆಲಿವಿಷನ್ ಇವುಗಳ ಅವಕಾಶವನ್ನು ಕಲ್ಪಿಸಿದರೆ ಮಕ್ಕಳಿಗೆ ಶ್ರೇಷ್ಠವೂ ಸೂಕ್ತವೂ ಆದ ಸನ್ನಿವೇಶದ ಸೌಲಭ್ಯ ದೊರೆತು ಅವರ ಬೆಳೆವಣಿಗೆ ಪರಿಪೂರ್ಣಗೊಳ್ಳುತ್ತದೆ.
ವ್ಯಕ್ತಿಯ ಬೆಳೆವಣಿಗೆಯಲ್ಲಿ ಅನುವಂಶೀಯತೆ, ಪರಿಸರಗಳ ಪ್ರಮುಖ್ಯ ಮತ್ತು ಪ್ರಭಾವಗಳ ಚರ್ಚೆಯಲ್ಲಿ ನನ್ ಮತ್ತು ವುಡ್‍ವರ್ತ್‍ರವರು ಒಂದು ಹೊಸಬೆಳೆಕನ್ನು ಬೀರಿದ್ದಾರೆ. ಅವರ ಪ್ರಕಾರ, ಮಗು ತನ್ನ ಅಭಿವೃದ್ಧಿಯನ್ನು ತಾನೇ ನಿರ್ಧರಿಸಿಕೊಳ್ಳಬಲ್ಲ ಒಂದು ಚೈತನ್ಯಪೂರಿತ ಜೀವಿ. ಅದು ತನ್ನ ಅನುವಂಶೀಯತೆಯನ್ನೂ ಸನ್ನಿವೇಶವನ್ನೂ ಸಾಧನಗಳಾಗಿ ಉಪಯೋಗಿಸಬಲ್ಲ ಶಕ್ತಿಯಿಂದ ಕೂಡಿದ ಒಂದು ಕೇಂದ್ರ. ಆದ್ದರಿಂದ ಕೇವಲ ಅನುವಂಶೀಯತೆಯೇ ಆಗಲಿ, ಪರಿಸರವೇ ಆಗಲಿ ಅದರ ಅಭಿವೃದ್ದಿಗೆ ಕಾರಣವಾಗಲಾರದು. ಆದರೆ ಇವೆರಡು ಅದರ ಸ್ವತಂತ್ರ ವರ್ತನೆಗೆ ಆಧಾರಗಳು. ಆದ್ದರಿಂದ ವಿವಿಧಶಕ್ತಿ, ಅಭಿರುಚಿ, ಚಟುವಟಿಕೆಗಳನ್ನು ಪ್ರದರ್ಶಿಸುವ ಮಕ್ಕಳಿಗೆ ಸ್ವಪ್ರಯತ್ನದಿಂದ ವಿಕಸಿಸಲು ಅವಕಾಶ ಒದಗಿಸುವುದೂ ಶಿಕ್ಷಣದ ಧ್ಯೇಯವಾಗಿರಬೇಕು.

(ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ